ಮತ್ತೆ ಬರಲಿದ್ದಾನೆ ಬಿಗ್‌ಬಿಯ ಬಿಲಾಲ್

Update: 2017-11-25 10:55 GMT

ಮಲಯಾಳಂನ ಸೂಪರ್‌ಸ್ಟಾರ್ ಮಮ್ಮುಟ್ಟಿ, ತನ್ನ ಚಿತ್ರಬದುಕಿನ ಅತ್ಯುತ್ತಮ ಪಾತ್ರವೊಂದನ್ನು ಮತ್ತೊಮ್ಮೆ ಬೆಳ್ಳಿತೆರೆಗೆ ತರಲು ಸಿದ್ಧರಾಗುತ್ತಿದ್ದಾರೆ. ಹೌದು, 2007ರಲ್ಲಿ ರಿಲೀಸ್ ಆಗಿ, ಭರ್ಜರಿ ಯಶಸ್ಸು ಕಂಡಿದ್ದ ಬಿಗ್‌ಬಿ ಮಲಯಾಳಂ ಚಿತ್ರದ ಸಿಕ್ವೇಲ್‌ನಲ್ಲಿ ಅವರು ನಟಿಸಲಿದ್ದಾರೆ. ಬಿಗ್‌ಬಿಯ ಮೊದಲ ಭಾಗದಲ್ಲಿ ಜನಮನಸೂರೆಗೊಂಡಿದ್ದ ಬಿಲಾಲ್ ಪಾತ್ರದಲ್ಲಿ ಅವರು ಮತ್ತೊಮ್ಮೆ ನಟಿಸಲಿದ್ದಾರೆ. ಮಮ್ಮುಟ್ಟಿ ಪುತ್ರ ದುಲ್ಕರ್ ಸಲ್ಮಾನ್, ಈ ಅದ್ದೂರಿ ಚಿತ್ರದ ಫಸ್ಟ್‌ಲುಕ್ ಪೋಸ್ಟರ್‌ನ್ನು ಈಗಾಗಲೇ ಟ್ವೀಟ್ ಮಾಡಿದ್ದು, ಅದಕ್ಕೆ ಚಿತ್ರರಸಿಕರ ಭರ್ಜರಿ ಪ್ರಶಂಸೆ ದೊರೆತಿದೆ.

ಬಿಗ್‌ಬಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಅಮಲ್ ನಿರಾದ್ ಅವರೇ ಈ ಚಿತ್ರಕ್ಕೂ ನಿರ್ದೇಶಕರಾಗಲಿದ್ದಾರೆ. ಅಷ್ಟೇ ಅಲ್ಲ ಚಿತ್ರದ ನಿರ್ಮಾಪಕರೂ ಆಗಲಿದ್ದಾರೆ. ಜನಪ್ರಿಯ ಹಾಲಿವುಡ್ ಚಿತ್ರ ಫೋರ್ ಬ್ರದರ್ಸ್‌ನಿಂದ ಸ್ಫೂರ್ತಿ ಪಡೆದಿದ್ದ ಬಿಗ್‌ಬಿ, ಬಾಕ್ಸ್‌ಆಫೀಸ್ ಕೊಳ್ಳೆಹೊಡೆದಿತ್ತು. ಬಿಲಾಲ್ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ. ಈ ನಡುವೆ ಮೋಹನ್‌ಲಾಲ್ ಪುತ್ರ ಪ್ರಣವ್, ಈ ಚಿತ್ರದಲ್ಲಿ ನಟಿಸುವ ಸಾಧ್ಯತೆಯೂ ಇದೆ ಎಂಬ ಸುದ್ದಿ ಮಾಲಿವುಡ್‌ನಲ್ಲಿ ದಟ್ಟವಾಗಿ ಹರಡಿದೆ. ಒಟ್ಟಿನಲ್ಲಿ ಬಿಲಾಲ್ ಚಿತ್ರೀಕರಣಕ್ಕೆ ಮುನ್ನವೇ ಸದ್ದು ಮಾಡುತ್ತಿರುವುದಂತೂ ನಿಜ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News