25 ವರ್ಷಗಳ ಬಳಿಕ ಒಂದಾದ ಆರ್‌ಜಿವಿ ನಾಗಾರ್ಜುನ

Update: 2017-11-25 10:59 GMT

ಬರೋಬ್ಬರಿ 28 ವರ್ಷಗಳ ಹಿಂದೆ ರಾಮ್‌ಗೋಪಾಲ್ ವರ್ಮಾ, ‘ಶಿವಾ’ ಮೂಲಕ ಚಿತ್ರ ನಿರ್ದೇಶನಕ್ಕೆ ಕಾಲಿಟ್ಟಿದ್ದರು. ನಾಯಕ ನಟ ನಾಗಾರ್ಜುನ ಕೂಡಾ ಶಿವಾ ಮೂಲಕ ತೆಲುಗುಚಿತ್ರರಂಗದ ಸೂಪರ್‌ಸ್ಟಾರ್‌ಗಳ ಸಾಲಿಗೆ ಸೇರ್ಪಡೆಗೊಂಡಿದ್ದರು. ಪ್ರಚಂಡ ಯಶಸ್ಸು ಕಂಡಿದ್ದ ಶಿವಾ ಚಿತ್ರವು ಇಂದಿಗೂ ಆರ್‌ಜಿವಿಯವರ ಅತ್ಯುತ್ತಮ ಸಿನೆಮಾ ಕೃತಿಗಳಲ್ಲಿ ಒಂದೆನಿಸಲಿವೆ.

ಇದೀಗ ಆರ್‌ಜಿವಿ ಹಾಗೂ ನಾಗಾರ್ಜುನ ಮತ್ತೆ ಒಂದಾಗುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಫಸ್ಟ್‌ಲುಕ್ ಪೋಸ್ಟರ್‌ಗಳ ಅಂತರ್ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ನಾಗಾರ್ಜುನ ಖುದ್ದಾಗಿ ಈ ಪೋಸ್ಟರ್‌ಗಳನ್ನು ಟ್ವಿಟರ್‌ನಲ್ಲಿ ಹರಿಯಬಿಟ್ಟಿದ್ದಾರೆ. 28 ವರ್ಷಗಳ ಹಿಂದೆ ಶಿವ ಎಂಬ ಚಿತ್ರ ನನ್ನ ಬದುಕನ್ನೇ ಬದಲಾಯಿಸಿತು. ಇದೀಗ ಮತ್ತೊಮ್ಮೆ ಇನ್ನೊಂದು ಚಿತ್ರವು ಅದೇ ಅವಕಾಶ ನೀಡಿದೆ. ನನ್ನಿಂದ ಬಣ್ಣಿಸಲೂ ಆಗದಂತಹ ಭಾವನೆಯೊಂದು ಮೂಡುತ್ತಿದೆ.

ಚಿತ್ರದ ಫಸ್ಟ್‌ಲುಕ್ ಪೋಸ್ಟರ್‌ನಲ್ಲಿ ನಾಗಾರ್ಜುನ್ ಗನ್ ಹಿಡಿದು ಪೋಸ್‌ಕೊಟ್ಟಿರುವುದನ್ನು ಕಂಡು ಅವರ ಅಭಿಮಾನಿಗಳೂ ಪುಳಕಗೊಂಡಿದ್ದಾರೆ. ಇನ್ನೊಂದು ಸ್ಟಿಲ್‌ನಲ್ಲಿ ನಾಗಾರ್ಜುನ ಪಿಸ್ತೂಲ್ ಜೊತೆಗೆ ನೋಟುಗಳ ಕಂತೆಯನ್ನು ಹಿಡಿದಿರುವ ನೋಟವಿದೆ. ಒಟ್ಟಿನಲ್ಲಿ ಈ ಚಿತ್ರದಲ್ಲಿ ನಾಗಾರ್ಜುನ ರಫ್ ಆ್ಯಂಡ್ ಟಫ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆಂಬುದನ್ನು ಊಹಿಸಲು ಈ ಎರಡು ಸೀನ್‌ಗಳು ಸುಳಿವು ನೀಡುತ್ತವೆಯೆಂದು ಟಾಲಿವುಡ್ ಮಂದಿಯ ಅಂಬೋಣ.

ಇತ್ತ ಆರ್‌ಜಿವಿಗೂ, ಸುಮಾರು 25 ವರ್ಷಗಳ ಆನಂತರ ನಾಗಾರ್ಜುನ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಸಂತಸ ತಂದಿದೆ. ಆದರೆ ಕೆಲವರು ಅಂದುಕೊಂಡಿರುವಂತೆ ಈ ಹೊಸ ಚಿತ್ರಕ್ಕೂ, ಹಿಂದಿನ ಶಿವಾ ಚಿತ್ರಕ್ಕೂ ಕಥೆಯಲ್ಲಾಗಲಿ ಅಥವಾ ಪಾತ್ರದಲ್ಲಾಗಲಿ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟೀಕರಣವನ್ನು ಕೂಡಾ ಅವರು ನೀಡಿದ್ದಾರೆ. ನಾಗಾರ್ಜುನ ಆಗಲಿ, ತಾನಾಗಲಿ ಹಿಂದೆಂದೂ ಮಾಡಿರದಂತಹ ಅತ್ಯಂತ ರಿಯಲಿಸ್ಟಿಕ್ ಆ್ಯಕ್ಷನ್ ಥ್ರಿಲ್ಲರ್ ಇದಾಗಲಿದೆಯೆಂದು ಅವರು ಹೇಳಿಕೊಂಡಿದ್ದಾರೆ.

ಅಂದಹಾಗೆ ಚಿತ್ರದ ನಾಯಕಿಯಾಗಿ ಅನುಷ್ಕಾ ಶೆಟ್ಟಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಮಾತುಕತೆ ಕೂಡಾ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News