×
Ad

ಗೋರಖ್‌ಪುರ ದುರಂತ: ಭ್ರಷ್ಟಾಚಾರ ಆರೋಪದಿಂದ ಡಾ. ಕಫೀಲ್ ಖಾನ್ ಮುಕ್ತ

Update: 2017-11-26 09:31 IST

ಹೊಸದಿಲ್ಲಿ, ನ. 26: ಗೋರಖ್‌ಪುರ ಬಿಆರ್‌ಡಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ಕಫೀಲ್ ಖಾನ್ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಈ ಮೂಲಕ ಭ್ರಷ್ಟಾಚಾರ ಆರೋಪದಿಂದ ಅವರು ಮುಕ್ತರಾದಂತಾಗಿದೆ.

ಗೋರಖ್‌ಪುರ ಆಸ್ಪತ್ರೆಯಲ್ಲಿ ಕಳೆದ ಆಗಸ್ಟ್‌ನಲ್ಲಿ ಆಮ್ಲಜನಕ ಪೂರೈಕೆ ಸ್ಥಗಿತಗೊಂಡ ಕಾರಣ ಮಕ್ಕಳು ಸಾಮೂಹಿಕವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಡಾ. ಖಾನ್ ಹಾಗೂ ಇತರ ಎಂಟು ಮಂದಿಯನ್ನು ಬಂಧಿಸಲಾಗಿತ್ತು. 

ಸರ್ಕಾರದಿಂದ ವಿಚಾರಣೆಗೆ ಅನುಮತಿ ಪಡೆದ ಬಳಿಕ ಪೊಲೀಸರು ಡಾ. ಖಾನ್ ಹಾಗೂ ಬಿಎಂಸಿಎಚ್ ಪ್ರಾಚಾರ್ಯ ಡಾ.ರಾಜೀವ್ ಮಿಶ್ರಾ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಅಪರಾಧ ಪಿತೂರಿ ಹಾಗೂ ಸಾಮೂಹಿಕ ಹತ್ಯೆ ಪ್ರಯತ್ನ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಆರೋಪ ಹೊರಿಸಲಾಗಿತ್ತು.

ಡಾ. ಖಾನ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಥವಾ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಆರೋಪ ಹೊರಿಸಿಲ್ಲ. ಆದರೆ ಐಪಿಸಿ ಸೆಕ್ಷನ್ 409, 308 ಹಾಗೂ 120 ಬಿ ಅಡಿಯಲ್ಲಿ ಆರೋಪ ದಾಖಲಿಸಲಾಗಿದೆ ಎಂದು ವಿಶೇಷ ಎಸ್ಪಿ ಸತ್ಯಾರ್ಥ ಅನಿರುದ್ಧ ಪಂಕಜ್ ಹೇಳಿದ್ದಾರೆ. ಆದರೆ ಡಾ. ಮಿಶ್ರಾ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯವೂ ಆರೋಪಪಟ್ಟಿ ಸಲ್ಲಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಅಮಾನತುಗೊಂಡ ಬಿಎಂಸಿಎಚ್‌ನ ಆರು ಮಂದಿ ಸಿಬ್ಬಂದಿ ವಿರುದ್ಧ ಅಕ್ಟೋಬರ್ 27ರಂದು ಆರೋಪಟ್ಟಿ ಸಲ್ಲಿಸಲಾಗಿತ್ತು.

ಎರಡು ದಿನಗಳ ಹಿಂದೆ ಆಹಾರ ಸುರಕ್ಷೆ ಮತ್ತು ಔಷಧ ಆಡಳಿತ ಇಲಾಖೆ, ಪುಷ್ಪಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಸಗಟು ಲೈಸನ್ಸ್ ಇಲ್ಲದೇ ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡುತ್ತಿದ್ದ ಕಾರಣಕ್ಕೆ ಪ್ರಕರಣ ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News