ಬಡ ಹಿಂದೂ ಕುಟುಂಬದ ಯುವತಿಯ ವಿವಾಹ ನೆರವೇರಿಸಿದ ಮುಸ್ಲಿಮರು

Update: 2017-11-26 12:31 GMT

ಪಶ್ಚಿಮ ಬಂಗಾಳ, ನ.26: ಇಲ್ಲಿನ ಹಿಂದೂ ಬಡ ಕುಟುಂಬವೊಂದರ ಹೆಣ್ಣು ಮಗಳೊಬ್ಬಳ ವಿವಾಹವನ್ನು ಮುಸ್ಲಿಮರೇ ಸೇರಿ ನೆರವೇರಿಸಿ ಸೌಹಾರ್ದ ಮೆರೆದು ಮಾದರಿಯಾಗಿದ್ದಾರೆ. ಇಲ್ಲಿರುವ 600 ಮನೆಗಳ ಪೈಕಿ ಕೇವಲ 8 ಮನೆ ಹಿಂದೂಗಳದ್ದಾಗಿದೆ.

ಮದ್ರಸ ಗುರುಗಳಾದ ಮುತೀವುರ್ರಹ್ಮಾನ್ ನೇತೃತ್ವದಲ್ಲಿ ಸರಸ್ವತಿ ಎಂಬ ಯುವತಿಯ ವಿವಾಹಕ್ಕೆ ಮುಸ್ಲಿಮರು ನೆರವಾಗಿದ್ದಾರೆ. ಮಾಲ್ಡಾ ಜಿಲ್ಲೆಯ ಖಾನ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸರಸ್ವತಿಯ ತಂದೆ ತ್ರಿಜ್ ಲಾಲ್ ಚೌಧರಿ 3 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಆನಂತರದಲ್ಲಿ ಈ ಕುಟುಂಬ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿತ್ತು. 5 ಹೆಣ್ಣುಮಕ್ಕಳು ಓರ್ವ ಗಂಡು ಮಗನನ್ನು ಸಾಕಲು ಸರಸ್ವತಿಯ ತಾಯಿ ಸೊವರಾಣಿ ಭಾರೀ ಕಷ್ಟಪಡುತ್ತಿದ್ದರು. ಇದೇ ಸಂದರ್ಭ ಸರಸ್ವತಿಯ ಮದುವೆಯೂ ನಿಗದಿಯಾಗಿತ್ತು.

ವರನ ಕಡೆಯವರು ಕೇಳಿದ 2000 ರೂ. ಗಳನ್ನು ಸೊವರಾಣಿ ಹೇಗೋ ಹೊಂದಿಸಿದ್ದರು. ಆದರೆ ಮದುವೆ ಕಾರ್ಯಕ್ರಮ ನಡೆಸಲು ಅವರಲ್ಲಿ ಒಂದು ರೂಪಾಯಿಯೂ ಇರಲಿಲ್ಲ.

“ಸೊವರಾಣಿಯವರ ಸಮಸ್ಯೆಯ ಬಗ್ಗೆ ತಿಳಿದ ನಂತರ ನಾನು ಅಬ್ದುಲ್ ಬಾರಿ, ಇಮಾದುಲ್ ರಹ್ಮಾನ್, ಜಲಾಲುದ್ದೀನ್, ಶಹೀದುಲ್ ಇಸ್ಲಾಮ್ ಸೇರಿದಂತೆ ಇತರರೊಡನೆ ಚರ್ಚೆ ನಡೆಸಿದೆ. ಬೇರೆ ಧರ್ಮದವಳಾದರೂ ಸರಸ್ವತಿ ನಮ್ಮ ಮಗಳಿದ್ದಂತೆ ಅಂದುಕೊಂಡೆವು. ಆದ್ದರಿಂದ ಮದುವೆ ಸಮಾರಂಭ ನಡೆಸುವುದು ನಮ್ಮ ಕರ್ತವ್ಯವಾಗಿತ್ತು” ಎಂದು ಮುತೀವುರ್ರಹ್ಮಾನ್ ಹೇಳುತ್ತಾರೆ.

ತಕ್ಷಣ ಹಣ ಹೊಂದಿಸಿದ ಅವರು ಸೊವರಾಣಿಯವರ ಬಳಿ ತೆರಳಿ ಹಣ ನೀಡಿ ಮದುವೆ ಸಮಾರಂಭ ನಡೆಸುವಂತೆ ಹೇಳಿದರು. ನವೆಂಬರ್ 25ರಂದು ಸರಸ್ವತಿಯ ಮದುವೆ ನೆರವೇರಿದ್ದು, ಸ್ವತಃ ಮುತೀವುರ್ರಹ್ಮಾನ್ ಮನೆಯ ಮುಂಭಾಗ ನಿಂತು ವರನ ಮನೆಯವರನ್ನು, ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News