ರಾಮಚಂದ್ರ ಗುಹಾ ಜೊತೆ ಉದ್ಧಟತನ ಪ್ರದರ್ಶಿಸಿದ ಇಂಡಿಗೋ ಸಿಬ್ಬಂದಿ

Update: 2017-11-27 15:11 GMT

ಹೊಸದಿಲ್ಲಿ,ನ.27: ವಿಮಾನಯಾನ ಸಂಸ್ಥೆ ಇಂಡಿಗೋದ ಸಿಬ್ಬಂದಿಗಳು ದಿಲ್ಲಿಯಲ್ಲಿ ಪ್ರಯಾಣಿಕರೋರ್ವರೊಂದಿಗೆ ಅನುಚಿತವಾಗಿ ನಡೆದುಕೊಂಡ ಘಟನೆ ಇನ್ನೂ ಹಸಿರಾಗಿರುವಾಗಲೇ ಖ್ಯಾತ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರು ಇದೇ ಸಂಸ್ಥೆಯ ಸಿಬ್ಬಂದಿಗಳ ‘ಅಪ್ರಚೋದಿತ ಒರಟುತನ’ಕ್ಕಾಗಿ ಅವರನ್ನು ಟ್ವಿಟರ್‌ನಲ್ಲಿ ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.

ಕಳೆದೊಂದು ವಾರದಿಂದಲೂ ಇಂಡಿಗೋ ಸಿಬ್ಬಂದಿಗಳು ತನ್ನೊಂದಿಗೆ ಅಪ್ರಚೋದಿತ ಒರಟುತನದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ರವಿವಾರ ಟ್ವೀಟಿಸಿರುವ ಗುಹಾ, ಮೂರು ವಿಭಿನ್ನ ವಿಮಾನ ನಿಲ್ದಾಣಗಳಲ್ಲಿ ಇಂಡಿಗೋಕ್ಕೆ ಸೇರಿದ ಮೂವರು ಬೇರೆ ಬೇರೆ ಸಿಬ್ಬಂದಿಗಳಿಂದ ತನಗೆ ಈ ಅನುಭವವಾಗಿದೆ ಎಂದು ಬೆಟ್ಟು ಮಾಡಿದ್ದಾರೆ.

ಇದು ಅತ್ಯಂತ ಆಘಾತಕಾರಿ ಎಂದಿರುವ ಅವರು, ತಾನು ಸಾಮಾನ್ಯವಾಗಿ ಟ್ವಿಟರ್‌ನ್ನು ಬಳಕೆದಾರರ ದೂರುಗಳ ವೇದಿಕೆಯನ್ನಾಗಿ ಬಳಸುವುದಿಲ್ಲ. ಆದರೆ ಒಂದೇ ವಾರದಲ್ಲಿ ಮೂರು ಬಾರಿ ಒಂದೇ ವಿಮಾನಯಾನ ಸಂಸ್ಥೆಯ ಸಿಬ್ಬಂದಿಗಳು ತನ್ನೊಡನೆ ಅನುಚಿತವಾಗಿ ವರ್ತಿಸಿದ್ದರಿಂದ ಈ ಬಾರಿ ತನ್ನ ಪರಿಪಾಠವನ್ನು ಕೈಬಿಟ್ಟಿದ್ದೇನೆ ಎಂದಿದ್ದಾರೆ.

ಒರಟುತನ ಇಂಡಿಗೋದ ಚಟವಾಗಿದೆ ಎಂದು ಸ್ನೇಹಿತರು ಮತ್ತು ಕುಟುಂಬ ಸದಸ್ಯರೂ ದೃಢಪಡಿಸಿದ್ದಾರೆ ಎಂದೂ ಗುಹಾ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News