ಮೊದಲು ಶ್ರೀನಗರದ ಲಾಲ್‌ಚೌಕದಲ್ಲಿ ರಾಷ್ಟ್ರಧ್ವಜ ಅರಳಿಸಿ: ಫಾರೂಕ್ ಅಬ್ದುಲ್ಲಾ

Update: 2017-11-27 16:23 GMT

ಶ್ರೀನಗರ, ನ.27: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮತ್ತೊಂದು ವಿವಾದಾಸ್ಪದ ಹೇಳಿಕೆ ನೀಡಿದ್ದು, ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ರಾಷ್ಟ್ರಧ್ವಜ ಅರಳಿಸುವ ಬಗ್ಗೆ ಹೇಳಿಕೆ ನೀಡುವ ಮೊದಲು ಶ್ರೀನಗರದ ಕೇಂದ್ರಭಾಗದಲ್ಲಿರುವ ಲಾಲ್‌ಚೌಕದಲ್ಲಿ ಮೊದಲು ರಾಷ್ಟ್ರಧ್ಜಜಾರೋಹಣ ಮಾಡಿ ಎಂದು ಕೇಂದ್ರ ಸರಕಾರಕ್ಕೆ ಸವಾಲು ಹಾಕಿದ್ದಾರೆ.

ಪಿಒಕೆಯಲ್ಲಿ ಧ್ವಜಾರೋಹಣ ನಡೆಸುವ ಬಗ್ಗೆ ಕೇಂದ್ರ ಸರಕಾರದವರು ಮಾತನಾಡುತ್ತಿದ್ದಾರೆ. ಆದರೆ ಮೊದಲು ಶ್ರೀನಗರದ ಲಾಲ್‌ಚೌಕದಲ್ಲಿ ತ್ರಿವರ್ಣ ಧ್ವಜವನ್ನು ಅರಳಿಸಿ ಎಂದವರಿಗೆ ನಾನು ಹೇಳುತ್ತಿದ್ದೇನೆ. ಇದನ್ನು ಮಾಡಲೂ ಸಾಧ್ಯವಿಲ್ಲದ ಅವರು ಪಿಒಕೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅಬ್ದುಲ್ಲಾ ಹೇಳಿದರು. ನಿಮಗೆ ಸತ್ಯವನ್ನು ಕೇಳಲು ಇಷ್ಟವಿಲ್ಲದಿದ್ದರೆ ಸುಳ್ಳಿನ ಜೊತೆಯಲ್ಲೇ ಬದುಕು ಸಾಗಿಸಿ. ಸತ್ಯ ಎಂದರೆ ಪಿಒಕೆ ನಮ್ಮ ಭಾಗವಲ್ಲ ಮತ್ತು ಜಮ್ಮು-ಕಾಶ್ಮೀರ(ಜೆ-ಕೆ) ಪಾಕಿಸ್ತಾನದ ಭಾಗವಲ್ಲ ಎಂದು ಅಬ್ದುಲ್ಲಾ ಹೇಳಿದರು. ಕಾಂಗ್ರೆಸ್ ಮುಖಂಡ ದಿವಂಗತ ಜಿ.ಎಲ್.ಡೋಗ್ರ ಅವರ 30ನೇ ಪುಣ್ಯತಿಥಿಯ ಕಾರ್ಯಕ್ರಮದಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅಬ್ದುಲ್ಲಾ ಮಾತನಾಡುತ್ತಿದ್ದರು.

   ಹೀಗೆಲ್ಲಾ ಮಾತನಾಡುವ ಮೂಲಕ ನೀವು ಭಾರತೀಯರ ಭಾವನೆಗೆ ಘಾಸಿ ಉಂಟುಮಾಡುತ್ತಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಭಾರತೀಯರೆಂದರೆ ಯಾರು. ನಾನು ಭಾರತೀಯನಲ್ಲವೇ ಎಂದು ಪ್ರಶ್ನಿಸಿದರು. ಕಾಶ್ಮೀರದಲ್ಲಿ ರಜೆ ಮೇಲಿರುವ ಯೋಧರು ಹಾಗೂ ಸೇನಾಧಿಕಾರಿಗಳನ್ನು ಹತ್ಯೆ ಮಾಡುವ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಶ್ನೆಯನ್ನು ಕೇಂದ್ರ ಸರಕಾರಕ್ಕೆ ಕೇಳಬೇಕು. ನೋಟು ನಿಷೇಧದ ಬಳಿಕ ಕಾಶ್ಮೀರದಲ್ಲಿ ಸಹಜಸ್ಥಿತಿ ನೆಲೆಸಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದೆಯಲ್ಲವೇ ಎಂದರು.

  ರಜೌರಿ ಜಿಲ್ಲೆಯಲ್ಲಿ ಕೆಲ ದಿನದ ಹಿಂದೆ ರಾಷ್ಟ್ರಗೀತೆ ನುಡಿಸುವಾಗ ಎದ್ದುನಿಲ್ಲಲು ನಿರಾಕರಿಸಿದ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಸರಕಾರ ತೀವ್ರ ಕ್ರಮ ಕೈಗೊಂಡು ಅವರಿಂದ ಕ್ಷಮಾಪಣೆ ಕೇಳಿಸಬೇಕು. ರಾಷ್ಟ್ರಗೀತೆಗೆ ಗೌರವ ಕೊಡಬೇಕಿರುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದು ಅಬ್ದುಲ್ಲಾ ಹೇಳಿದರು. ಕಾಶ್ಮೀರ ರಾಜ್ಯದಲ್ಲಿ ಶಾಂತಿ ನೆಲೆಸುವಂತಾಗಲು ಸಂಬಂಧಪಟ್ಟ ಪಕ್ಷಗಳೊಂದಿಗೆ ಮಾತುಕತೆ ನಡೆಸಲು ನೇಮಕಗೊಂಡಿರುವ ಕೇಂದ್ರದ ವಿಶೇಷ ಪ್ರತಿನಿಧಿ ದಿನೇಶ್ವರ ಶರ್ಮಗೆ ಶುಭಹಾರೈಸಿದರು. ಈ ಮಧ್ಯೆ , ಅಬ್ದುಲ್ಲಾ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಅಬ್ದುಲ್ಲಾ ಹತಾಶರಾಗಿದ್ದು ತಮ್ಮ ವಿವಾದಾಸ್ಪದ ಹೇಳಿಕೆಯಿಂದ ಪ್ರತ್ಯೇಕತಾವಾದಿಗಳಿಗೆ ಹಾಗೂ ಭಯೋತ್ಪಾದಕರಿಗೆ ಶಕ್ತಿ ತುಂಬುತ್ತಿದ್ದಾರೆ. ಲಾಲ್‌ಚೌಕ ಸೇರಿದಂತೆ ದೇಶದ ಎಲ್ಲೆಡೆ ತ್ರಿವರ್ಣ ಧ್ವಜವನ್ನು ಅರಳಿಸಲಾಗುತ್ತದೆ ಎಂಬುದನ್ನು ಬಹುಷಃ ಅವರು ಮರೆತಿದ್ದಾರೆ ಎಂದು ಜಮ್ಮು ಕಾಶ್ಮೀರದ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News