×
Ad

ಬಾಲಗಂಗಾಧರ ತಿಲಕ್ ಮರಿಮೊಮ್ಮಗನ ವಿರುದ್ಧ ಅತ್ಯಾಚಾರ ಆರೋಪ

Update: 2017-11-29 18:20 IST

ಪುಣೆ, ನ.29: ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರ ಮರಿಮೊಮ್ಮಗ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕ ರೋಹಿತ್ ತಿಲಕ್ ವಿರುದ್ಧ ಪುಣೆ ಪೊಲೀಸರು ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ರೋಹಿತ್ ವಿರುದ್ಧ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಮತ್ತು ಆಕೆಯನ್ನು ಅಸ್ವಾಭಾವಿಕ ಲೈಂಗಿಕಕ್ರಿಯೆಗೆ ಬಲವಂತಪಡಿಸಿದ ಆರೋಪ ಹೊರಿಸಲಾಗಿದ್ದು ಈ ಬಗ್ಗೆ ವಿಶ್ರಾಮ್‌ಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರೋಹಿತ್ ತಿಲಕ್ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸಂಸದರಾಗಿದ್ದ ದಿವಂಗತ ಜಯಂತ್‌ರಾವ್ ತಿಲಕ್ ಅವರ ಮಗನಾಗಿದ್ದಾರೆ.

ಪೊಲೀಸರ ಪ್ರಕಾರ 41ರ ಹರೆಯದ ದೂರುದಾರ ಮಹಿಳೆ ಮತ್ತು ರೋಹಿತ್ 2015ರಲ್ಲಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದು ನಂತರ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕದಲ್ಲಿದ್ದರು. ನಂತರ ರೋಹಿತ್ ಸಂತ್ರಸ್ತೆಯನ್ನು ವಿವಾಹಿತವಾಗುವ ಭರವಸೆ ನೀಡಿ ಹಲವು ಬಾರಿ ಅತ್ಯಾಚಾರ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ರೋಹಿತ್ ವಿವಾಹವಾಗಿರುವ ಬಗ್ಗೆ ಆರಂಭದಲ್ಲಿ ತಿಳಿದಿರಲಿಲ್ಲ ಎಂದು ದೂರುದಾರೆ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಂತರ ಆಕೆ ಗರ್ಭಿಣಿಯಾದಾಗ ರೋಹಿತ್ ಗರ್ಭಪಾತ ಮಾಡುವಂತೆ ಆಕೆಯನ್ನು ಒತ್ತಾಯಿಸಿದ್ದ ಮತ್ತು ಆಕೆ ತನ್ನನ್ನು ಮದುವೆಯಾಗುವಂತೆ ಮನವಿ ಮಾಡಿದಾಗ ಆಕೆಯ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪೊಲೀಸರು ಆರೋಪಿ ವಿರುದ್ಧ ಅತ್ಯಾಚಾರ, ಹಲ್ಲೆ, ಮಾನಹಾನಿ ಮತ್ತು ಬೆದರಿಕೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೆ ಸದ್ಯ ಯಾರನ್ನೂ ಬಂಧಿಸಿಲ್ಲ.

ತಾನು ರೋಹಿತ್ ಕುಟುಂಬದಿಂದ ಕೊಲೆ ಬೆದರಿಕೆಯನ್ನು ಎದುರಿಸುತ್ತಿರುವುದಾಗಿ ಸಂತ್ರಸ್ತ ಮಹಿಳೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ವೃತ್ತಿಯಲ್ಲಿ ವಕೀಲೆಯಾಗಿರುವ ಸಂತ್ರಸ್ತೆ ರೋಹಿತ್ ತನ್ನಿಂದ ರೂ. ಹತ್ತು ಲಕ್ಷವನ್ನು ಪಡೆದುಕೊಂಡಿರುವುದಾಗಿಯೂ ತಿಳಿಸಿದ್ದಾರೆ.

ರೋಹಿತ್ ತಿಲಕ್ 2014ರಲ್ಲಿ ಮಹಾರಾಷ್ಟ್ರದ ಕಸ್ಬಾ ಪೇಟ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದು ಬಿಜೆಪಿಯ ಗಿರೀಶ್ ಬಪತ್ ವಿರುದ್ಧ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News