×
Ad

ಸಿಬಿಐ ವಿಶೇಷ ನ್ಯಾಯಾಲಯದಿಂದ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದ ವಿಚಾರಣೆ

Update: 2017-11-29 18:25 IST
 ಸಾಂದರ್ಭಿಕ ಚಿತ್ರ

ಮುಂಬೈ, ನ.29: ಸೊಹ್ರಾಬುದ್ದೀನ್ ಶೇಕ್ ಮತ್ತು ತುಲಸಿ ಪ್ರಜಾಪತಿ  ಎನ್‌ಕೌಂಟರ್ ಪ್ರಕರಣದ ವಿಚಾರಣೆಯು ಮುಂಬೈಯಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ.

ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ 22 ಮಂದಿಯನ್ನು ಕೊಲೆ, ಅಪಹರಣ ಮತ್ತು ಸಾಕ್ಷನಾಶ ಹಿನ್ನೆಲೆಯಲ್ಲಿ ಆರೋಪಿಗಳೆಂದು ಹೆಸರಿಲಾಗಿದೆ. ಸೊಹ್ರಬುದ್ದೀನ್ ಸೋದರ ನಯಿಮುದ್ದೀನ್ ಸೇರಿದಂತೆ 22 ಜನರು ಈ ಪ್ರಕರಣದ ಸಾಕ್ಷಿ ನುಡಿಯಲಿದ್ದಾರೆ.

ನ್ಯಾಯಾಲಯವು ಸೊಹ್ರಾಬುದ್ದೀನ್ ಸಹೋದರ ನಯಿಮುದ್ದೀನ್ ಸೇರಿದಂತೆ ಹಲವರಿಗೆ ಸಮನ್ಸ್ ಜಾರಿ ಮಾಡಿದ್ದು ನವೆಂಬರ್ 29ರಿಂದ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗುವುದು ಎಂದು ಸಿಬಿಐ ಪರ ವಕೀಲ ಬಿಪಿ ರಾಜು ತಿಳಿಸಿದ್ದಾರೆ.

ನವೆಂಬರ್ 2005ರಲ್ಲಿ ಸೊಹ್ರಾಬುದ್ದೀನ್ ಶೇಕ್ ಮತ್ತವನ ಪತ್ನಿ ಕೌಸರ್ ಬಿಯನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹದಳದ (ಎಟಿಎಸ್) ಅಧಿಕಾರಿಗಳು ಹೈದರಾಬಾದ್‌ನಿಂದ ಮಹಾರಾಷ್ಟ್ರದ ಸಾಂಗ್ಲಿಗೆ ತೆರಳುತ್ತಿದ್ದ ವೇಳೆ ಅಪಹರಿಸಿ ನಂತರ ಗಾಂಧಿನಗರದ ಬಳಿ ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದರು ಎಂದು ಸಿಬಿಐ ಆರೋಪಿಸಿತ್ತು.

ಶೇಕ್ ಪತ್ನಿ ಕೌಸರ್ ಬಿ ಕೂಡಾ ಈ ಘಟನೆಯ ನಂತರ ನಿಗೂಢವಾಗಿ ನಾಪತ್ತೆಯಾಗಿದ್ದರು. ಶೇಕ್‌ನ ಸ್ನೇಹಿತ ಮತ್ತು ಘಟನೆಯ ಸಾಕ್ಷಿಯಾಗಿದ್ದ ತುಲಸಿ ಪ್ರಜಾಪತಿಯನ್ನು ಕೂಡಾ 2006ರ ಡಿಸೆಂಬರ್‌ನಲ್ಲಿ ಪೊಲೀಸರು ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಚಾಪ್ರಿ ಗ್ರಾಮದಲ್ಲಿ ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿದ್ದರು ಎಂದು ಸಿಬಿಐ ಆರೋಪಿಸಿತ್ತು.

2013ರಲ್ಲಿ ತನ್ನ ದೋಷಾರೋಪ ಪಟ್ಟಿಯಲ್ಲಿ ಸಿಬಿಐ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ 18 ಮಂದಿಯನ್ನು ಆರೋಪಿಗಳೆಂದು ಹೆಸರಿಸಿತ್ತು. ಇವರಲ್ಲಿ ಹಲವು ಪೊಲೀಸ್ ಅಧಿಕಾರಿಗಳೂ ಇದ್ದರು. ಆದರೆ ನಂತರ ಸಿಬಿಐ ನ್ಯಾಯಾಲಯ ಅಮಿತ್ ಶಾಗೆ ಕ್ಲೀನ್ ಚಿಟ್ ನೀಡಿತ್ತು.

ಈ ಪ್ರಕರಣದಲ್ಲಿ ನ್ಯಾಯಯುತ ವಿಚಾರಣೆಯ ಅಗತ್ಯವಿದೆ ಎಂದು ಸಿಬಿಐ ತಿಳಿಸಿದ ಕಾರಣ 2012ರಲ್ಲಿ ಈ ಪ್ರಕರಣವನ್ನು ಮುಂಬೈ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.

ಈ ವರ್ಷದ ಆರಂಭದಲ್ಲಿ ಸಿಬಿಐ ನ್ಯಾಯಾಲಯ ಗುಜರಾತ್‌ನ ಮಾಜಿ ಐಪಿಎಸ್ ಅಧಿಕಾರಿ ಡಿಜಿ ವಂಝಾರ ಮತ್ತು ದಿನೇಶ್ ಎಮ್‌ಎನ್ ಅವರನ್ನೂ ಪ್ರಕರಣದಿಂದ ಕೈಬಿಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News