ದೇಶವನ್ನು ಲೂಟಿ ಮಾಡಿದವರಿಂದ ಡಕಾಯಿತರ ಸ್ಮರಣೆ
ಅಹ್ಮದಾಬಾದ್, ನ.29: ದೇಶವನ್ನು ಲೂಟಿ ಮಾಡಿದವರು ಡಕಾಯಿತರನ್ನು ಸ್ಮರಿಸುವುದರಲ್ಲಿ ಅಚ್ಚರಿಯೇನಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಗುಜರಾತ್‌ನ ಮೋರ್ಬಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಿಎಸ್‌ಟಿಯನ್ನು ಗಬ್ಬರ್‌ಸಿಂಗ್ ಟ್ಯಾಕ್ಸ್ ಎಂದು ಲೇವಡಿ ಮಾಡಿರುವ ರಾಹುಲ್ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದರು. ದೇಶವನ್ನು ಲೂಟಿ ಮಾಡಿರುವವರು ಡಕಾಯಿತರನ್ನು ಸ್ಮರಿಸುವುದರಲ್ಲಿ ಅಚ್ಚರಿಯೇನಿಲ್ಲ. ಜಿಎಸ್‌ಟಿ ಕುರಿತ ಯಾವುದೇ ಸಲಹೆಯನ್ನು ಸ್ವೀಕರಿಸಲು ನಮ್ಮ ಸರಕಾರ ಮುಕ್ತವಾಗಿದೆ . ಆದ್ದರಿಂದಲೇ ನೀವು ಹೇಳಿದಂತೆ ಸೆರಾಮಿಕ್ ಉದ್ಯಮದ ಮೇಲಿನ ಜಿಎಸ್‌ಟಿಯನ್ನು ಶೇ.10ರಷ್ಟು ಇಳಿಸಿದ್ದೇವೆ ಎಂದು ಮೋದಿ ಹೇಳಿದರು.
ಸೌರಾಷ್ಟ್ರ ವಲಯದಲ್ಲಿರುವ ಮೋರ್ಬಿ ದೇಶದ ಸೆರಾಮಿಕ್ ಉದ್ಯಮದ ಕೇಂದ್ರಸ್ಥಾನ ಎನಿಸಿದೆ. ಸಾಂಪ್ರದಾಯಿಕವಾಗಿ ಬಿಜೆಪಿಯ ಭದ್ರಕೋಟೆಯಾಗಿರುವ ಮೋರ್ಬಿ ಪ್ರದೇಶದಲ್ಲಿ ಇತ್ತೀಚೆಗೆ ಪಟೇಲರ ಚಳವಳಿ ಹಾಗೂ ಜಿಎಸ್‌ಟಿ ವಿರೋಧಿ ಪ್ರತಿಭಟನೆ ನಡೆದಿರುವುದು ಬಿಜೆಪಿಗೆ ತುಸು ಆತಂಕ ಹುಟ್ಟಿಸಿದೆ ಎನ್ನಲಾಗಿದೆ. ನಿಮ್ಮದೇ ವ್ಯಕ್ತಿ ದಿಲ್ಲಿಯಲ್ಲಿರುವ ಅವಕಾಶವನ್ನು ಇದೇ ಪ್ರಪ್ರಥಮ ಬಾರಿಗೆ ನೀವು ಪಡೆದಿದ್ದೀರಿ. ಗುಜರಾತ್ ಎಂದಿಗೂ ನಷ್ಟದ ವ್ಯವಹಾರ ನಡೆಸದು. ಆದ್ದರಿಂದ ಈ ಅವಕಾಶವನ್ನು ಕೈಜಾರಲು ಬಿಡಬೇಡಿ ಎಂದು ಮೋದಿ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದರು.
1979ರ ಆಗಸ್ಟ್ 11ರಂದು ಮಚ್ಚು-2 ಅಣೆಕಟ್ಟು ಒಡೆದು ಮೋರ್ಬಿ ನಗರಕ್ಕೆ ನೆರೆನೀರು ನುಗ್ಗಿ ಹಲವು ಮಂದಿ ಬಲಿಯಾಗಿರುವ ಘಟನೆಯನ್ನು ಸ್ಮರಿಸಿಕೊಂಡ ಪ್ರಧಾನಿ, ಆಗಸ್ಟ್ 13ರಂದು ಇಲ್ಲಿಗೆ ಬಂದಿದ್ದ ನಾನು ಸುಮಾರು ಒಂದು ತಿಂಗಳು ಇಲ್ಲಿದ್ದೆ. ಆಗ ಆರೆಸ್ಸೆಸ್ ಮತ್ತು ಸಂಘಪರಿವಾರದ ಕಾರ್ಯಕರ್ತರು ಪರಿಹಾರ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದರು. ಆದರೆ ಆಗ ಇಲ್ಲಿಗೆ ಭೇಟಿ ನೀಡಿದ್ದ ಅಂದಿನ ಪ್ರಧಾನಿ ಇಂದಿರಾಗಾಂಧಿ ಗಬ್ಬುವಾಸನೆ ತಡೆಯಲು ಮೂಗಿಗೆ ಕರವಸ್ತ್ರ ಅಡ್ಡಹಿಡಿದಿದ್ದರು ಎಂದು ಮೋದಿ ಹೇಳಿದರು.
ನೀರಿನ ಕೊರತೆ ಸೌರಾಷ್ಟ್ರ ಮತ್ತು ಕಛ್ ಪ್ರದೇಶದಲ್ಲಿ ಈ ಹಿಂದಿನಿಂದಲೂ ಒಂದು ಪ್ರಮುಖ ಸಮಸ್ಯೆಯಾಗಿದ್ದು, ಬಿಜೆಪಿ ಸರಕಾರ ಬೃಹತ್ ಪೈಪ್‌ಗಳ ಮೂಲಕ ನರ್ಮದಾ ನದಿ ನೀರನ್ನು ಸಾಗಿಸಿ ಪರಿಸ್ಥಿತಿಯನ್ನು ಸುಧಾರಿಸಿದೆ ಎಂದು ಮೋದಿ ಹೇಳಿದರು. ಸೋಮವಾರ ಸೌರಾಷ್ಟ್ರ ವಲಯದಲ್ಲಿ ಮೂರು ರ್ಯಾಲಿಗಳಲ್ಲಿ ಭಾಗವಹಿಸಿದ್ದ ಪ್ರಧಾನಿ, ಬುಧವಾರ ಮೋರ್ಬಿ, ಪ್ರಾಚಿ ಹಾಗೂ ಪಲಿಟಾನದಲ್ಲಿ ಮೂರು ರ್ಯಾಲಿಗಳಲ್ಲಿ ಪಾಲ್ಗೊಂಡರು.
ಮನಮೋಹನ್ ಸಿಂಗ್‌ಗೆ ವೃದ್ಧಾಪ್ಯದ ಮರೆವು
ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಮೋದಿ ಯಾವತ್ತೂ ನರ್ಮದಾ ವಿಷಯದ ಬಗ್ಗೆ ಸೊಲ್ಲೆತ್ತಿಲ್ಲ ಎಂಬ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆಯನ್ನು ಉಲ್ಲೇಖಿಸಿದ ಮೋದಿ, ಬಹುಷಃ ಮನಮೋಹನ್ ಸಿಂಗ್‌ಗೆ ವೃದ್ಧಾಪ್ಯದ ಮರೆವು ಕಾಡಿರಬೇಕು. ಅಥವಾ ಈ ರೀತಿ ಹೇಳಿಕೆ ನೀಡುವಂತೆ ಕಾಂಗ್ರೆಸ್‌ನಿಂದ ಒತ್ತಡ ಬಂದಿರಬೇಕು ಎಂದರು.
ಮುಖ್ಯಮಂತ್ರಿಯಾಗಿದ್ದ ಸಂದರ್ಭ ತಾನು ಕೇಂದ್ರ ಸರಕಾರದೊಡನೆ ಹೋರಾಡಿ ನರ್ಮದಾ ನದಿ ನೀರನ್ನು ತರುವಲ್ಲಿ ಯಶಸ್ವಿಯಾಗಿದ್ದೇನೆ. ನರ್ಮದಾ ವಿಷಯದ ಬಗ್ಗೆ ಕೇಂದ್ರದ ಮೇಲೆ ಒತ್ತಡ ತರಲು ನಾನು ಉಪವಾಸ ಸತ್ಯಾಗ್ರಹ ಮಾಡಿದ್ದೇನೆ. ಮೂರು ದಿನ ಉಪವಾಸ ನಡೆಸಿ ಕೇಂದ್ರ ಸರಕಾರವನ್ನು ನಡುಗಿಸಿದ್ದೆ. ನ್ಯಾಯಾಲಯ ಮಧ್ಯಪ್ರವೇಶಿಸಿದ ಬಳಿಕ ನರ್ಮದಾ ಯೋಜನೆಯ ಕಾಮಗಾರಿ ಆರಂಭವಾಯಿತು ಎಂದು ಮೋದಿ ಹೇಳಿದರು.