ತನ್ನ ಅನುಯಾಯಿಗಳು ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದ್ದ ಗುರ್ಮೀತ್ ಸಿಂಗ್: ಆರೋಪ
ಚಂಡಿಗಡ, ನ.29: ತನ್ನ ವಿರುದ್ಧದ ಪ್ರಕರಣಗಳಿಂದ ಪಾರಾಗುವ ಸಲುವಾಗಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ತನ್ನ ಅನುಯಾಯಿಗಳು ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದ್ದ ಎಂಬ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ.
ಗುರ್ಮೀತ್ ಸಿಂಗ್‍ನ ನಿಕಟ ಅನುಯಾಯಿಯಾಗಿದ್ದ ರಾಮ್‍ಕುಮಾರ್ ಬಿಷ್ಣೋಯಿ ಪಂಜಾಬ್-ಹರ್ಯಾಣ ಹೈಕೋರ್ಟಿನಲ್ಲಿ ಈ ಸಂಬಂಧ ದೂರು ನೀಡಿದ್ದು, ದೇರಾ ಭಕ್ತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳನ್ನು ಸಿಬಿಐ ತನಿಖೆ ನಡೆಸಬೇಕೆಂದು ತನ್ನ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.
ಕೋರ್ಟ್ ಹಾಗು ಸರಕಾರದ ಮೇಲೆ ಒತ್ತಡ ಹೇರುವುದಕ್ಕಾಗಿ ಗುರ್ಮೀತ್ ಈ ಆತ್ಮಹತ್ಯೆ ತಂತ್ರವನ್ನು ಪ್ರಯೋಗಿಸಿದ್ದಾನೆ ಎಂದು ಆರೋಪಿಸಲಾಗಿದೆ. ಅತ್ಯಾಚಾರ ಪ್ರಕರಣದ ತೀರ್ಪು ಹೊರಬಿದ್ದ ದಿನ ಕೋರ್ಟ್ ಪರಿಸರ ಮೊದಲಾದೆಡೆ ಗುರ್ಮೀತ್ ಅನುಯಾಯಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ದೇರಾ ಅನುಯಾಯಿಗಳಾಗಿದ್ದ ಗುರುದಾಸ್ ಸಿಂಗ್ ತೂರ್, ಖಟ್ಟಾ ಸಿಂಗ್ ಎಂಬವರು ಕೂಡಾ ಈ ಆರೋಪ ಸತ್ಯ ಎಂದಿದ್ದು, ಗುರ್ಮೀತ್ ತನ್ನ ಅನುಯಾಯಿಗಳನ್ನು ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದ ಎಂದಿದ್ದಾರೆ.