×
Ad

ಸೋಮನಾಥ ದೇವಸ್ಥಾನ ಭೇಟಿ: ಹಿಂದುಯೇತರರ ಪಟ್ಟಿಯಲ್ಲಿ ರಾಹುಲ್ ಗಾಂಧಿ ಹೆಸರು

Update: 2017-11-29 20:17 IST

ಹೊಸದಿಲ್ಲಿ, ನ.29: ಬುಧವಾರದಂದು ಮತ್ತೆ ಗುಜರಾತ್ ಚುನಾವಣಾ ಅಖಾಡಕ್ಕೆ ಮರಳಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೊದಲಿಗೆ ಇಲ್ಲಿನ ಪ್ರಸಿದ್ಧ ಗಿರ್ ಸೋಮನಾಥ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಆದರೆ ಗಾಂಧಿ ಜೊತೆ ಆಗಮಿಸಿದ್ದವರಲ್ಲಿ ಯಾರೋ ಒಬ್ಬರು ರಾಹುಲ್ ಗಾಂಧಿ ಹೆಸರನ್ನು ಹಿಂದುಯೇತರ ಪಟ್ಟಿಯಲ್ಲಿ ನಮೂದಿಸಿದ್ದು ಸದ್ಯ ವಿವಾದಕ್ಕೆ ಕಾರಣವಾಗಿದೆ.

 ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ಸೋಮನಾಥ ದೇವಸ್ಥಾನ ಮಂಡಳಿಯ ಕಾರ್ಯದರ್ಶಿ ಪ್ರವೀಣ್ ಲಹೇರಿ, ದೇವಸ್ಥಾನಕ್ಕೆ ಆಗಮಿಸುವ ಎಲ್ಲಾ ಹಿಂದುಯೇತರರೂ ಕೂಡಾ ತಮ್ಮ ಹೆಸರನ್ನು ಪುಸ್ತಕದಲ್ಲಿ ಬರೆಯಬೇಕೆನ್ನುವ ನಿಯಮವಿದೆ. ಯಾರೋ ಅಹ್ಮದ್ ಪಟೇಲ್ ಮತ್ತು ರಾಹುಲ್ ಗಾಂಧಿಯ ಹೆಸರನ್ನು ಬರೆದಿದ್ದಾರೆ. ದೇವಸ್ಥಾನಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

 ಇದೇ ವೇಳೆ ಹೊಸದಿಲ್ಲಿಯಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ಕರೆದ ಕಾಂಗ್ರೆಸ್ ರಾಹುಲ್ ಗಾಂಧಿ ಯಾವುದೇ ಪುಸ್ತಕಕ್ಕೆ ಸಹಿ ಹಾಕಿಲ್ಲ ಎಂದು ಹೇಳಿಕೊಂಡಿದೆ. ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ದೀಪೇಂದ್ರ ಸಿಂಗ್ ಹೂಡಾ, ರಾಹುಲ್ ಗಾಂಧಿ ಶಿವನ ಪರಮ ಭಕ್ತರಾಗಿದ್ದಾರೆ ಮತ್ತು ಸತ್ಯದಲ್ಲಿ ನಂಬಿಕೆಯಿಟ್ಟವರಾಗಿದ್ದಾರೆ. ಬಿಜೆಪಿಯು ವಾಸ್ತವ ವಿಷಯಗಳಿಂದ ಗಮನವನ್ನು ಬೇರಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರವಾಸಿಗರ ಪುಸ್ತಕದ ಪ್ರತಿಯೊಂದನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಸಿಂಗ್, ಇದರಲ್ಲಿ ರಾಹುಲ್ ಗಾಂಧಿಜೀ ಎಂದು ಬರೆಯಲಾಗಿದೆ. ಆದರೆ ರಾಹುಲ್ ಗಾಂಧಿಯವರು ತಮ್ಮದೇ ಹೆಸರಿನ ಹಿಂದೆ ಜೀ ಎಂದು ಯಾಕೆ ಬರೆಯುತ್ತಾರೆ? ಇದನ್ನು ಯಾರು ಬರೆದಿದ್ದಾರೆ ಎಂದು ತಿಳಿದಿಲ್ಲ. ಬಿಜೆಪಿಯು ಈ ವಿಷಯವನ್ನೇ ದೊಡ್ಡದು ಮಾಡುತ್ತಿದೆ ಎಂದು ಆರೋಪಿಸಿದರು.

 ಇದೇ ವೇಳೆ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ಸರ್ದಾರ್ ಪಟೇಲರು ಇಲ್ಲದಿರುತ್ತಿದ್ದರೆ ಸೋಮನಾಥ ದೇವಾಲಯವೇ ಇರುತ್ತಿರಲಿಲ್ಲ. ಇಂದು ಕೆಲವರು ಸೋಮನಾಥನನ್ನು ನೆನೆಯುತ್ತಿದ್ದಾರೆ. ನಾವನವರಲ್ಲಿ ಕೇಳುತ್ತೇನೆ, ನಿಮಗೆ ಇತಿಹಾಸ ಮರೆತುಹೋಯಿತೇ? ಅಲ್ಲಿ ಸೋಮನಾಥ ದೇವಾಲಯವನ್ನು ನಿರ್ಮಿಸಲು ನಿಮ್ಮ ಕುಟುಂಬ ಸದಸ್ಯ ಮತ್ತು ನಮ್ಮ ಪ್ರಥಮ ಪ್ರಧಾನಿಯಿಂದ ಆಕ್ಷೇಪವಿತ್ತು ಎಂದರು.

ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಕೂಡಾ ಕಾಂಗ್ರೆಸ್ ಉಪಾಧ್ಯಕ್ಷನನ್ನು ತರಾಟೆಗೆ ತೆಗೆದುಕೊಂಡರು. ರಾಹುಲ್ ಗಾಂಧಿ ಇಂದು ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ದೇವಾಲಯದ ಸ್ಥಿತಿ ಕಾಂಗ್ರೆಸ್ ಆಡಳಿತದ ವೇಳೆ ಹೇಗಿತ್ತು ಎಂದು ಅವರಲ್ಲಿ ಅತವಾ ಅವರ ಪಕ್ಷದ ಜನರಲ್ಲಿ ಕೇಳಿ. ಮೋದಿಯವರು ರಾಹುಲ್ ಗಾಂಧಿ ಗುಜರಾತ್‌ನ 21 ದೇವಾಲಯಗಳನ್ನು ಸುತ್ತುವಂತೆ ಮಾಡಿದ್ದಾರೆ ಅದಕ್ಕಾಗಿ ನಾನು ಪ್ರಧಾನಿಯವರನ್ನು ಅಭಿನಂದಿಸುತ್ತೇನೆ ಎಂದು ಆನಂದಿಬೆನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News