ಇಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿನ ಪ್ರೋತ್ಸಾಹ: ನಿತಿನ್ ಗಡ್ಕರಿ
ಹೊಸದಿಲ್ಲಿ, ನ.29: ಪರಿಸರಮಾಲಿನ್ಯ ತಡೆಯುವ ನಿಟ್ಟಿನಲ್ಲಿ ವಿದ್ಯುತ್‌ಚಾಲಿತ ಕಾರುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ವಿದ್ಯುತ್‌ಚಾಲಿತ ಕಾರುಗಳು ಈಗಿನ ಕಾಲದಲ್ಲಿ ಅಗತ್ಯವಾಗಿದೆ. ಆದರೆ ಭಾರತದಲ್ಲಿ ಮಿಲಿಯಾಂತರ ಜನರು ವಾಹನಚಾಲಕರಾಗಿ ತಮ್ಮ ಬದುಕು ಸಾಗಿಸುತ್ತಿರುವ ಕಾರಣ ನಮ್ಮ ದೇಶಕ್ಕೆ ಸ್ವಯಂಚಾಲಿತ ಕಾರುಗಳ ಅಗತ್ಯವಿಲ್ಲ ಎಂದು ಸಚಿವರು ಹೇಳಿದರು. ಪ್ರಪ್ರಥಮ ‘ನ್ಯೂಸ್18.ಕಾಮ್ ಟೆಕ್ ಆ್ಯಂಡ್ ಆಟೊ ಅವಾರ್ಡ್ಸ್’ಗೆ ನಾಮ ನಿರ್ದೇಶನಗೊಂಡಿರುವವರಿಗೆ ಅಭಿನಂದನೆ ಸೂಚಿಸಿದ ಸಂದೇಶದಲ್ಲಿ ಸಚಿವ ಗಡ್ಕರಿ, ಭವಿಷ್ಯದಲ್ಲಿ ವಿದ್ಯುತ್‌ಚಾಲಿತ ವಾಹನಗಳಿಗೆ ಪ್ರಾಧಾನ್ಯತೆ ಇರಲಿದೆ ಎಂದಿದ್ದಾರೆ. ವಿದ್ಯುತ್‌ಚಾಲಿತ ವಾಹನಗಳ ಕುರಿತ ವಿವರವಾದ ಮಾಹಿತಿಯನ್ನು ನೀತಿ ಆಯೋಗ ಪ್ರಸ್ತುತಪಡಿಸಿದ ಬಳಿಕ ವಿದ್ಯುತ್‌ಚಾಲಿತ ವಾಹನಗಳಿಗೆ ಹೆಚ್ಚಿನ ರಿಯಾಯಿತಿಯನ್ನು ನಿರೀಕ್ಷಿಸಬಹುದು ಎಂದು ಹೇಳಿದರು.
ಭಾರತದ ಅಟೊಮೊಬೈಲ್ ಉದ್ಯಮ ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮದೇ ಛಾಪು ಮೂಡಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಸಚಿವರು, ಇದೀಗ ವಿದ್ಯುತ್‌ಚಾಲಿತ ವಾಹನಗಳ ಕ್ಷೇತ್ರದಲ್ಲಿ ಹೊಸ ಶೋಧ ನಡೆಸುವ ಅಗತ್ಯವಿದೆ. ವಾಹನಗಳಿಗೆ ವಿದ್ಯುತ್ ಚಾರ್ಜ್ ಮಾಡುವ ಸ್ಟೇಷನ್‌ಗಳನ್ನು ನಿರ್ಮಿಸುವ ಮೂಲಕ ಸರಕಾರ ನೆರವಾಗಲಿದೆ ಎಂದು ಹೇಳಿದರು. ಪ್ರಮುಖ ಕಾರು ಉತ್ಪಾದಿಸುವ ಸಂಸ್ಥೆಗಳು ಕಡಿಮೆ ವೆಚ್ಚದ ವಿದ್ಯುತ್ ಕಾರು ಉತ್ಪಾದನೆಯತ್ತ ಗಮನ ಹರಿಸಿವೆ.
ಮಹೀಂದ್ರಾ ಸಂಸ್ಥೆ ಉಬರ್ ಇಂಡಿಯಾ ಜೊತೆ, ಟೊಯೊಟವು ಸುಝುಕಿ ಸಂಸ್ಥೆಯ ಸಹಭಾಗಿತ್ವದಲ್ಲಿ ವಿದ್ಯುತ್ ಕಾರು ಉತ್ಪಾದಿಸಲಿವೆ ಎಂದು ಗಡ್ಕರಿ ತಿಳಿಸಿದರು. ಭಾರತದಲ್ಲಿ ವಾಹನ ಚಾಲನೆ ಕ್ಷೇತ್ರ ಮಿಲಿಯಾಂತರ ಜನರಿಗೆ ಉದ್ಯೋಗ ಒದಗಿಸಿದೆ. ಈಗ ಭಾರತದಲ್ಲಿ 22 ಲಕ್ಷ ವಾಹನ ಚಾಲಕರ ಕೊರತೆಯಿದೆ. ಈಗಿನ ಸಂದರ್ಭದಲ್ಲಿ ಸ್ವಯಂ ಚಾಲಿತ ಕಾರುಗಳು ನಮ್ಮ ದೇಶಕ್ಕೆ ಅಗತ್ಯವಿಲ್ಲ ಎಂದರು.
ದಿಲ್ಲಿಯಲ್ಲಿ ಚಳಿಗಾಲದಲ್ಲಿ ಕಂಡು ಬರುವ ಮಂಜಿನ ಮೋಡ ಹಾಗೂ ಟ್ರಾಫಿಕ್ ಸಮಸ್ಯೆಯ ಬಗ್ಗೆ ಉಲ್ಲೇಖಿಸಿದ ಅವರು, ದಿಲ್ಲಿಯ ರಾಜಧಾನಿ ಪ್ರದೇಶ ವ್ಯಾಪ್ತಿಯ ಸುತ್ತ ಬೈಪಾಸ್ ನಿರ್ಮಾಣ ಯೋಜನೆ ಮುಕ್ತಾಯದ ಹಂತದಲ್ಲಿದ್ದು 2018ರ ಜನವರಿ 26ರ ಮೊದಲು ಉದ್ಘಾಟನೆಯಾಗಲಿದೆ. ಮುಂದಿನ ವರ್ಷದ ಡಿಸೆಂಬರ್‌ನೊಳಗೆ 14 ಪಥಗಳ ಮೀರತ್ ಎಕ್ಸ್‌ಪ್ರೆಸ್ ರಸ್ತೆ ನಿರ್ಮಾಣವಾಗಲಿದೆ ಎಂದರು. ಪಾರದರ್ಶಕತೆ ಹಾಗೂ ದಕ್ಷತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಮುಖ ಕ್ರಮ ಎಂದು ಪರಿಗಣಿಸಲಾಗಿರುವ ಮೋಟಾರು ವಾಹನಗಳ ಕಾಯ್ದೆಗೆ ಮುಂಬರುವ ಚಳಿಗಾಲದ ಅಧಿವೇಶನದ ಸಂದರ್ಭ ರಾಜ್ಯಸಭೆಯಲ್ಲಿ ಅಂಗೀಕಾರ ದೊರಕುವ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದರು.