ಉ.ಪ್ರದೇಶ: ಪೌರ ಸಂಸ್ಥೆಗಳ ಚುನಾವಣೆಯಲ್ಲಿ ನಕಲಿ ಮತದಾನ,ಹಿಂಸಾಚಾರ
ಲಕ್ನೋ,ನ.29: ಬುಧವಾರ ನಡೆದ ಉತ್ತರ ಪ್ರದೇಶ ಪೌರ ಸಂಸ್ಥೆಗಳ ಮೂರನೇ ಹಂತದ ಚುನಾವಣೆಯಲ್ಲಿ ಹಲವಾರು ಮತಗಟ್ಟೆಗಳಲ್ಲಿ ನಕಲಿ ಮತದಾನ ಮತ್ತು ಹಿಂಸಾಚಾರದ ಕೆಲವು ಘಟನೆಗಳು ನಡೆದಿರುವುದು ವರದಿಯಾಗಿದೆ.
ರಾಜ್ಯಾದ್ಯಂತ 26 ಜಿಲ್ಲೆಗಳ ಐದು ಮಹಾ ನಗರ ಪಾಲಿಕೆಗಳು, 76 ನಗರ ಪಾಲಿಕಾ ಪರಿಷತ್‌ಗಳು ಮತ್ತು 152 ನಗರ ಪಂಚಾಯತ್‌ಗಳಿಗೆ ಮತದಾನ ನಡೆಯಿತು. ಮೊರಾದಾಬಾದ್‌ನಲ್ಲಿ ನಕಲಿ ಮತದಾನದ ವರದಿಯ ಬಳಿಕ ಹಿಂಸಾಚಾರ ನಡೆದಿದ್ದು, ನಕಲಿ ಮತದಾನದಲ್ಲಿ ತೊಡಗಿದ್ದ ಆರೋಪದಲ್ಲಿ ಮೂವರು ಮಹಿಳೆಯರನ್ನು ಬಂಧಿಸಲಾಗಿದೆ. ಸಹಾರನಪುರದ ಹಲವಾರು ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳು ನಾಪತ್ತೆಯಾಗಿರುವುದಕ್ಕೆ ಜನರು ಪ್ರತಿಭಟನೆ ನಡೆಸಿದರು.
ಭಾಗಪತ್,ಸಹಾರನಪುರ ಮತ್ತು ಬುಲಂದಶಹರ ಜಿಲ್ಲೆಗಳ ಕೆಲವು ಕಡೆಗಳಲ್ಲಿಯೂ ನಕಲಿ ಮತದಾನ ನಡೆದಿರುವುದು ವರದಿಯಾಗಿದೆ. ಇತರೆಡೆ ಮತದಾನ ಶಾಂತಿಯುತವಾಗಿತ್ತು ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದರು.
28,135 ಅಭ್ಯರ್ಥಿಗಳು ಮೂರನೇ ಹಂತದ ಚುನಾವಣಾ ಕಣದಲ್ಲಿದ್ದು, 94 ಲಕ್ಷಕ್ಕೂ ಅಧಿಕ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಾರೆ.