ಅಮಿತಾಬ್ ಗಿಂತಲೂ ಮೋದಿ 'ಉತ್ತಮ ನಟ': ರಾಹುಲ್ ವ್ಯಂಗ್ಯ

Update: 2017-11-30 10:53 GMT

ಅಹ್ಮದಾಬಾದ್,ನ.30 : "ಪ್ರಧಾನಿ ನರೇಂದ್ರ ಮೋದಿ ಅವರು ಅಮಿತಾಭ್ ಬಚ್ಚನ್‍ಕ್ಕಿಂತಲೂ ಬಹಳ ಉತ್ತಮ ನಟ. ಸಾರ್ವಜನಿಕ ಸ್ಥಳಗಳಲ್ಲಿ ದುಃಖಭರಿತ ದೃಶ್ಯಗಳಲ್ಲಿ ಅಭಿನಯಿಸಲು ಅವರಿಗೆ ಅಮಿತಾಭ್ ಅವರಂತೆ ಕಾಂಟಾಕ್ಟ್ ಲೆನ್ಸ್ ಧರಿಸುವ ಅಗತ್ಯವಿಲ್ಲ,'' ಎಂದು ಹೇಳುವ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ  ಮತ್ತೆ ಪ್ರಧಾನಿಯನ್ನು ಕುಹಕವಾಡಿದ್ದಾರೆ.

ಸೌರಾಷ್ಟ್ರ ಪ್ರಾಂತ್ಯದ ಅಮ್ರೇಲಿ ಜಿಲ್ಲೆಯ ಸಾವರಕುಂಡ್ಲ ಎಂಬಲ್ಲಿ ಸಾರ್ವಜನಿಕ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ರಾಹುಲ್ "ಅಮಾನ್ಯೀಕರಣ ಘೋಷಿಸಿದ ಕೆಲವು ದಿನಗಳ ನಂತರ ಕೂಡ ಮೋದಿ ಕಣ್ಣೀರು ಹರಿಸಿ ಕಾಳಧನ ಡಿಸೆಂಬರ್ 31ರೊಳಗಾಗಿ  ಹಿಂದೆ ಬರದೇ ಇದ್ದಲ್ಲಿ  ನೀವು ನನ್ನನ್ನು ಸಾರ್ವಜನಿಕವಾಗಿ ನೇಣಿಗೇರಿಸಬಹುದು ಎಂದು  ಹೇಳಿದ್ದರು. ಅವರು ಮತ್ತೆ ಡಿಸೆಂಬರ್ 19ರಂದು ಕಣ್ಣೀರು ಸುರಿಸಲಿದ್ದಾರೆ, ಅದಕ್ಕಿಂತ ಮೊದಲು ಕೂಡ ಕನಿಷ್ಠ ಒಂದೆರಡು ಬಾರಿ ಕಣ್ಣೀರು ಸುರಿಸಬಹುದು,'' ಎಂದು ರಾಹುಲ್ ಹೇಳಿದರು.

ತಮ್ಮ ಸರಕಾರ ಅಧಿಕಾರಕ್ಕೆ ಬಂದ ಹತ್ತೇ ದಿನದಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂಬ ಭರವಸೆಯನ್ನೂ ರಾಹುಲ್  ತಮ್ಮ ರ್ಯಾಲಿಗಳಲ್ಲಿ ನೀಡುತ್ತಾ ಬಂದಿದ್ದಾರೆ.

'ಗುಜರಾತ್ ಮಾಂಗಾಯೆ ಜವಾಬ್' (ಗುಜರಾತ್ ಉತ್ತರ ಬಯಸುತ್ತಿದೆ) ಎಂಬ  ಸಾಮಾಜಿಕ ಜಾಲತಾಣ ಅಭಿಯಾನವನ್ನೂ ರಾಹುಲ್ ಬುಧವಾರ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News