ಚಿತ್ರದ ಹೆಸರು 'ವಿವಿಕ್ತ' - ಸಸ್ಪೆನ್ಸ್ ನ ಎಳೆ ಅವ್ಯಕ್ತ!

Update: 2017-11-30 18:42 GMT

ನವ ನಿರ್ದೇಶಕ ರಘು ಅಪ್ಪು ನಿರ್ದೇಶನದ ಚಿತ್ರ 'ವಿವಿಕ್ತ'ದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.

ನಿರ್ದೇಶಕ ಗಡ್ಡ ವಿಜಿಯ 'ಪ್ಲಸ್', 'ದ್ಯಾವ್ರೇ' ಚಿತ್ರಗಳ ಸಹಾಯಕ ನಿರ್ದೇಶಕರಾಗಿದ್ದ ರಘು ಅಪ್ಪು ಹೊಸ ರೀತಿಯ ಚಿತ್ರ ಮಾಡುವ ಹುಮ್ಮಸ್ಸಿನಲ್ಲಿ ಆಗಮಿಸಿದ್ದಾರೆ. ಇದು ಹೊಸ ರೀತಿಯ ಎಳೆಯ ಕತೆಯಾಗಿದ್ದು, ವಿವಿಕ್ತ ಅಂದರೆ ಏಕಾಂತ ಎಂದು ನಿರ್ದೇಶಕರು ತಿಳಿಸಿದರು. ಚಿತ್ರದಲ್ಲಿ ಅದೇ ನಾಯಕಿಯ ಹೆಸರಾಗಿರುವುದಾಗಿ ಅವರು ಹೇಳಿದರು.

ಇದೊಂದು ಸಸ್ಪೆನ್ಸ್ ಕತೆಯಾಗಿದ್ದು ಇದರಲ್ಲಿ ಪ್ರೇಮಕತೆ ಕೂಡ ಅಡಗಿದೆ.ಮಡಿಕೇರಿ ಮೊದಲಾಡೆಗಳಲ್ಲಿ ಚಿತ್ರೀಕರಣ ನಡೆಸಲಿದ್ದು ಎರಡು ಕೋಟಿ ವೆಚ್ಚದಲ್ಲಿ ಚಿತ್ರ ಪೂರ್ತಿಗೊಳಿಸುವ ಯೋಜನೆ ಇದೆ ಎಂದು ಅವರು ಹೇಳಿದರು.

ಚಿತ್ರದಲ್ಲಿ ಧರ್ಮಕೀರ್ತಿರಾಜ್ ನಾಯಕನಾಗಿ ನಟಿಸುತ್ತಿದ್ದಾರೆ. ತಾನೋರ್ವ ಶ್ರೀಮಂತ ಹುಡುಗನ‌ ಪಾತ್ರ ನಿರ್ವಹಿಸುತ್ತಿದ್ದು, ಕಚೇರಿಯಲ್ಲಿ ಪ್ರೀತಿ ಮೂಡುವ ಕತೆಯಿದೆ. ಸ್ಟೈಲಿಷ್ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಅವರು ಹೇಳಿದರು.ಚಿತ್ರಕ್ಕೆ ನಾಯಕಿಯಾಗಿರುವ ಪೂಜಾ ತಮ್ಮ ಹೆಸರನ್ನು ಚಿತ್ರದ ಮೂಲಕ ಸಾನಿಕಾ ಎಂದು ಬದಲಾಯಿಸಿಕೊಳ್ಳುತ್ತಿರುವುದಾಗಿ ತಿಳಿಸಿದರು. ಈ ಹಿಂದೆ ನಾನು 'ಸಾಹೇಬ' ಚಿತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲಿ
ತಂದೆತಾಯಿ ಇರದ ಅನಾಥ ಹುಡುಗಿಯ ಪಾತ್ರ ತಮ್ಮದು. ಯುಕ್ತ ಎಂಬ ತನ್ನ ಹೆಸರು ಚಿತ್ರದ ಕೊನೆಗೆ ವಿವಿಕ್ತ ಆಗಿ ಹೇಗೆ ಬದಲಾಗುತ್ತದೆ ಎನ್ನುವುದೇ ಚಿತ್ರದ ಕತೆ ಎಂದು ಅವರು ಹೇಳಿದರು.

ಸಂಗೀತ ನಿರ್ದೇಶಕ ಗಣೇಶ್ ನಾರಾಯಣ್ ಮಾತನಾಡಿ, ವಿವಿಕ್ತದಲ್ಲಿ ನಾಲ್ಕು ಹಾಡುಗಳಿದ್ದು, ನಾಲ್ಕು ಹಾಡುಗಳು ಕೂಡ 
ವಿಷಯಕ್ಕೆ ಹೊಂದಿಕೊಂಡಂಥ ಹಾಡುಗಳು. ಅವುಗಳಲ್ಲಿ ಒಂದು ಮೆಲೊಡಿ ಒಂದು ಡ್ಯುಯೆಟ್ ಆಗಿದ್ದು, ಉಳಿದ ‌ಮೂರು ಹಾಡುಗಳು ಪ್ಯಾಥೋ ಆಗಿರುತ್ತದೆ ಎಂದರು.

ಯುವ ಬರಹಗಾರ ಅಭಿ 'ಕನಸಿನ ಕವನ' ಎನ್ನುವ ಕಾವ್ಯ ನಾಮದೊಂದಿಗೆ ಗೀತರಚನೆಕಾರರಾಗಿದ್ದಾರೆ.ನಾನು ನಿರ್ದೇಶಕರ ಊರಿನಿಂದಲೇ ಬಂದ ಕಾರಣ ಚಿತ್ರಕ್ಕೆ ಹಾಡುಗಳನ್ನು ಬರೆಯುವ ಅವಕಾಶ ದೊರಕಿದೆ. ಈ ಹಿಂದೆ 'ಅರಣ್ಯಾನಿ' ಚಿತ್ರಕ್ಕೆ ಹಾಡು ಬರೆದಿದ್ದೇನೆ ಎಂದರು. "ಅರಳಿದ ಹೂಗಳಲ್ಲಿ ಹೊಸ ಹೊಸ ಭಾವ ಚೆಲ್ಲಿ.." ಎನ್ನುವ ತಮ್ಮ ಗೀತೆಯ ನಾಲ್ಕು ಸಾಲುಗಳನ್ನು ಮಾಧ್ಯಮದ ಮುಂದೆ ಪ್ರಸ್ತುತ ಪಡಿಸಿದರು.

ಯುವ ನಿರ್ಮಾಪಕ ರಾಕೇಶ್ ತಾವು ಸಿವಿಲ್ ಇಂಜಿನಿಯರಿಂಗ್ ಮುಗಿಸಿ ವೃತ್ತಿಯಲ್ಲಿರುವುದಾಗಿ ತಿಳಿಸಿದರು. ಅವರೊಂದಿಗೆ ಸಂಬಂಧಿ ಭಾಸ್ಕರ್ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಛಾಯಾಗ್ರಾಹಕ ಭಾಸ್ಕರ್ ವಿ ರೆಡ್ಡಿ ಈ ಹಿಂದೆ 'ಪ್ರೀತಿ ಗೀತಿ ಇತ್ಯಾದಿ' ಚಿತ್ರಕ್ಕೆ ಛಾಯಾಗ್ರಹಣ ನಿರ್ವಹಸಿರುವುದನ್ನು ನೆನಪಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News