ಆರ್ಥಿಕ ಪುನಶ್ಚೇತನ: ಸರ್ಕಾರ ಸಮರ್ಥನೆ

Update: 2017-12-01 03:53 GMT

ಹೊಸದಿಲ್ಲಿ, ಡಿ.1: ಸೆಪ್ಟೆಂಬರ್‌ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯ ಪ್ರಗತಿದರ ಸುಧಾರಿಸಿದೆ. ಈ ಮೂಲಕ ನೋಟು ರದ್ದತಿ ಹಾಗೂ ಜಿಎಸ್‌ಟಿ ಜಾರಿಯಿಂದಾದ ಪರಿಣಾಮದ ಕಾರ್ಮೋಡದಿಂದ ದೇಶ ಹೊರಬಂದಿದೆ. ಮುಂದಿನ ತಿಂಗಳುಗಳಲ್ಲಿ ಧೀರ್ಘಕಾಲಿಕ ಪುನಶ್ಚೇತನಕ್ಕೆ ಸಜ್ಜಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಿಂದ ಕಂಡುಬಂದಿದ್ದ ಇಳಿಕೆ ಪ್ರವೃತ್ತಿ ಮುಗಿದಿದೆ. ಉತ್ಪಾದನಾ ಕ್ಷೇತ್ರದ ಕ್ಷಿಪ್ರ ಪ್ರಗತಿಯಿಂದಾಗಿ ಆರ್ಥಿಕ ಪುನಶ್ಚೇತನ ಆರಂಭವಾಗಿದೆ. ಮೊದಲ ತ್ರೈಮಾಸಿಕದಲ್ಲಿ ಶೇಕಡ 1.2ರಷ್ಟಿದ್ದ ಉತ್ಪಾದನಾ ಕ್ಷೇತ್ರದ ಪ್ರಗತಿ ಶೇಕಡ 7ಕ್ಕೆ ಹೆಚ್ಚಿದೆ. ಈ ಚಲನೆ ಮುಂದುವರಿಯಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲೆ ಹೇಳಿದ್ದಾರೆ.

ಆರ್ಥಿಕತೆ ಪ್ರಗತಿ ಕುಂಠಿತವಾಗಿರುವುದನ್ನು ವಿರೋಧ ಪಕ್ಷಗಳು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿಸಿಕೊಂಡಿರುವ ಬೆನ್ನಲ್ಲೇ ಸರ್ಕಾರ ಹೊಸ ಅಂಕಿಅಂಶಗಳೊಂದಿಗೆ ಸಮರ್ಥನೆಗೆ ಹೊರಟಿದೆ. ಈ ಪ್ರಗತಿ ಚಿತ್ರಣ ಬಿಜೆಪಿಗೆ ವರದಾನವಾಗಲಿದೆ ಎಂದು ಹೇಳಲಾಗಿದೆ. ಸೆಪ್ಟೆಂಬರ್‌ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡ 6.3ರ ಪ್ರಗತಿ ದಾಖಲಾಗಿದ್ದು, ಐದು ತ್ರೈಮಾಸಿಕಗಳ ನಿಧಾನ ಪ್ರವೃತ್ತಿ ಕೊನೆಗೊಂಡಂತಾಗಿದೆ ಎಂದು ದೇಶದ ಮುಖ್ಯ ಅಂಕಿಸಂಖ್ಯೆಗಳ ಅಧಿಕಾರಿ ಟಿಸಿಎ ಅನಂತ್ ಮಾಹಿತಿ ನೀಡಿದ್ದಾರೆ.

ಪ್ರಗತಿಪಥ ಸಹಜ ಸ್ಥಿತಿಗೆ ಬಂದಿದೆ. ಉತ್ತಮ ಮುಂಗಾರು ಬೆಳೆ, ಜಿಎಸ್‌ಟಿ ರಿಯಾಯ್ತಿಯಿಂದಾಗಿ ಉತ್ಪಾದಕ ವಲಯಕ್ಕೆ ಉತ್ತೇಜನದಂಥ ಕ್ರಮದಿಂದಾಗಿ ಆರ್ಥಿಕ ತಜ್ಞರು ಧನಾತ್ಮಕ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಡೀ ವರ್ಷ ಆರ್ಥಿಕ ಪ್ರಗತಿ ಶೇಕಡ 7ರ ಆಸುಪಾಸಿನಲ್ಲಿ ಮುಂದುವರಿಯುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

ಆದರೆ ಕೃಷಿ ಕ್ಷೇತ್ರದಲ್ಲಿ ನಿಧಾನ ಪ್ರವೃತ್ತಿ ಮುಂದುವರಿದಿದ್ದು, ಕೇವಲ ಶೇಕಡ 1.7ರಷ್ಟು ಪ್ರಗತಿ ದಾಖಲಾಗಿದೆ. ಹಿಂದಿನ ತ್ರೈಮಾಸಿಕದಲ್ಲಿ ಇದು ಶೇಕಡ 2.3 ಮತ್ತು 2016-17ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಶೇಕಡ 4.1ರಷ್ಟು ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News