ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕಿಯರಿಗೆ ಪೇಚು

Update: 2017-12-01 04:20 GMT
ಸಾಂದರ್ಭಿಕ ಚಿತ್ರ

ಗುವಾಹತಿ, ಡಿ.1: ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದ ಶಾಲೆಯೊಂದರಲ್ಲಿ 88 ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಆರೋಪದಲ್ಲಿ ಮೂವರು ಶಿಕ್ಷಕಿಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕೆಲ ವಿದ್ಯಾರ್ಥಿನಿಯರು ಮುಖ್ಯ ಶಿಕ್ಷಕರ ವಿರುದ್ಧ ಅಶ್ಲೀಲ ಟಿಪ್ಪಣಿಯನ್ನು ಬರೆದಿದ್ದಾರೆ ಎಂದು ಆಪಾದಿಸಿ ಶಿಕ್ಷಾರ್ಥವಾಗಿ 6 ಮತ್ತು 7ನೇ ತರಗತಿಯ 88 ವಿದ್ಯಾರ್ಥಿನಿಯರನ್ನು ಇತರ ವಿದ್ಯಾರ್ಥಿನಿಯರ ಮುಂದೆ ಬಟ್ಟೆ ಬಿಚ್ಚಿಸಲಾಗಿತ್ತು ಎಂದು ಆಪಾದಿಸಲಾಗಿದೆ. ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ.

ಬುಧವಾರ ಸ್ಥಳೀಯ ವಿದ್ಯಾರ್ಥಿ ಸಂಘಟನೆ ಈ ಬಗ್ಗೆ ದೂರು ನೀಡಿತ್ತು. ಆದರೆ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಶಾಲೆಗೆ ತೆರಳಿ ವಿದ್ಯಾರ್ಥಿನಿಯರಿಂದ ಹೇಳಿಕೆ ಪಡೆದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

"ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ಬಿ ಅನ್ವಯ ಶಿಕ್ಷಕಿಯರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಸಂತ್ರಸ್ತರು ಹೇಳಿಕೆ ನೀಡಿದ್ದಾರೆ. ಪೋಕ್ಸೊ ಕಾಯ್ದೆಯ ಅನ್ವಯವೂ ಶಾಲಾಡಳಿತದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ" ಎಂದು ಎಸ್ಪಿ ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ.

ರಾಜ್ಯ ಶಿಕ್ಷಣ ಇಲಾಖೆ ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದು, ಇಬ್ಬರು ಶಿಕ್ಷಕರಿಯರನ್ನು ಸೇವೆಯಿಂದ ವಜಾ ಮಾಡಿದೆ. ಮತ್ತೊಬ್ಬ ಶಿಕ್ಷಕಿಯನ್ನು ಅಮಾನತುಗೊಳಿಸಿದೆ ಎಂದು ಶಿಕ್ಷಣ ಇಲಾಖೆ ಕಾರ್ಯದರ್ಶಿ ಬಿದೋಲ್ ತಯೆಂಗ್ ಪ್ರಕಟಿಸಿದ್ದಾರೆ.

ಆಲ್‌ಪಪೂಮ್ ಪಾರ್ ಜಿಲ್ಲಾ ವಿದ್ಯಾರ್ಥಿ ಸಂಘ ವಿದ್ಯಾರ್ಥಿನಿಯರನ್ನು ಹಾಗೂ ಶಿಕ್ಷಕಿಯರನ್ನು ಭೇಟಿ ಮಾಡಿ ವಿವರ ಪಡೆದಿತ್ತು. ಅನಾಮಧೇಯ ವಿದ್ಯಾರ್ಥಿನಿಯೊಬ್ಬಳು ಮುಖ್ಯ ಶಿಕ್ಷಕರ ಹೆಸರನ್ನು ಬಳಸಿ ಅಶ್ಲೀಲವಾಗಿ ಟಿಪ್ಪಣಿ ಬರೆದಿದ್ದಾಳೆ. ಇದಕ್ಕಾಗಿ ಶಿಕ್ಷಕಿ 6 ಮತ್ತು 7ನೇ ತರಗತಿ ವಿದ್ಯಾರ್ಥಿನಿಯರಿಂದ ವಿವರಣೆ ಬಯಸಿದ್ದರು. ಬಳಿಕ ಶಿಕ್ಷೆಯ ರೂಪದಲ್ಲಿ ಇತರ ವಿದ್ಯಾರ್ಥಿನಿಯರ ಮುಂದೆ ಬಟ್ಟೆ ಬಿಚ್ಚಿಸಿದರು ಎಂದು ಸಂಘಟನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News