ಎಐಎಡಿಎಂಕೆಯಲ್ಲಿ ಮುಂದುವರಿದ ಚಿಹ್ನೆ ಸಮರ: ಚುನಾವಣಾ ಆಯೋಗದ ನಿರ್ಧಾರಕ್ಕೆ ಶಶಿಕಲಾ ಬಣ ವಿರೋಧ

Update: 2017-12-01 16:13 GMT

ಹೊಸದಿಲ್ಲಿ, ಡಿ.1: ತಮಿಳುನಾಡು ಮುಖ್ಯಮಂತ್ರಿ ಇ ಕೆ ಪಳನಿಸ್ವಾಮಿಯ ಏಕೀಕೃತ ಎಐಎಡಿಎಂಕೆಯನ್ನು ನಿಜವಾದ ಎಐಎಡಿಎಂಕೆ ಪಕ್ಷವೆಂದು ಘೋಷಿಸಿ ಅವರಿಗೆ ಪಕ್ಷದ ಚಿಹ್ನೆಯಾದ ಎರಡೆಲೆಯನ್ನು ಉಪಯೋಗಿಸಲು ಅನುಮತಿ ನೀಡಿರುವ ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಶಶಿಕಲಾ-ಟಿಟಿವಿ ದಿನಕರನ್ ಬಣ ದಿಲ್ಲಿ ಉಚ್ಛನ್ಯಾಯಾಲಯದ ಮೊರೆ ಹೋಗಿದೆ.

ಈ ಪ್ರಕರಣದ ವಿಚಾರಣೆ ಕೋರಿ ಪ್ರಬಾರ ಮುಖ್ಯ ನ್ಯಾಯಾಧೀಶರಾದ ಗೀತಾ ಮಿತ್ತಲ್ ಮತ್ತು ನ್ಯಾಯಾಧೀಶ ಸಿ ಹರಿಶಂಕರ್ ನೇತೃತ್ವದ ಪೀಠದ ಮುಂದೆ ಮನವಿ ಮಾಡಲಾಗಿದ್ದು ಚುನಾವಣಾ ಆಯೋಗದ ನವೆಂಬರ್ 23ರ ಆದೇಶವನ್ನು ರದ್ದು ಮಾಡುವಂತೆ ಕೋರಲಾಗಿದೆ.

ಶಶಿಕಲಾ ಮತ್ತು ದಿನಕರನ್ ಪರ ವಕೀಲರಾದ ಹಿರಿಯ ನ್ಯಾಯವಾದಿ ಕೀರ್ತಿ ಉಪ್ಪಲ್, ಚುನಾವಣಾ ಆಯೋಗದ ಆದೇಶವು ಕಾನೂನಾತ್ಮಕವಾಗಿ ಸರಿಯಲ್ಲದಿರುವ ಕಾರಣ ಅದನ್ನು ಬದಿಗಿರಸಬೇಕಾದ ಅಗತ್ಯವಿರುವ ಕಾರಣ ಈ ಪ್ರಕರಣದ ವಿಚಾರಣೆಯನ್ನು ಶೀಘ್ರ ನಡೆಸಬೇಕಿದೆ ಎಂದು ಹೇಳಿಕೊಂಡಿದ್ದಾರೆ. ಹಿರಿಯ ವಕೀಲರ ಮಾತಿಗೆ ಸಮ್ಮತಿ ಸೂಚಿಸಿದ ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು ಶನಿವಾರಕ್ಕೆ ನಿಗದಿಪಡಿಸಿದೆ.

 ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾರ ಸಾವಿನಿಂದ ತೆರವಾದ ಆರ್‌ಕೆ ನಗರ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯನ್ನು ಘೋಷಿಸಿದ ನಂತರದ ದಿನಗಳಿಂದ ಚಿಹ್ನೆ ವಿವಾದವು ಭುಗಿಲೆದ್ದಿತ್ತು. ಆರ್‌ಕೆ ನಗರ್ ಉಪಚುನಾವಣೆಯು ಡಿಸೆಂಬರ್ 21ರಂದು ನಡೆಯಲಿದೆ.

ನವೆಂಬರ್ 23ರಂದು ಚುನಾವಣಾ ಆಯೋಗವು ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ನೇತೃತ್ವದ ಏಕೀಕೃತ ಎಐಎಡಿಎಂಕೆ ಎರಡೆಲೆಯ ಚಿಹ್ನೆಯನ್ನು ಉಪಯೋಗಿಸಲು ಅನುಮತಿ ನೀಡುವ ಮೂಲಕ ಶಶಿಕಲಾ-ದಿನಕರನ್ ಬಣ ತೀವ್ರ ಮುಖಭಂಗಕ್ಕೀಡಾಗಿತ್ತು.

ಆರ್‌ಕೆ ನಗರ್ ಉಪಚುನಾವಣೆಯಲ್ಲಿ ಎಐಎಡಿಎಂಕೆಯ ಅಭ್ಯರ್ಥಿ ಮಧುಸೂಧನನ್, ಪಳನಿಸ್ವಾಮಿ, ಪನ್ನೀರ್‌ಸೆಲ್ವಂ ಮತ್ತು ಶಾಸಕ ಸೆಮ್ಮಲೈ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಮನವಿಯಲ್ಲಿ ಕೋರಲಾಗಿತ್ತು. ಚಿಹ್ನೆಗೆ ಸಂಬಂಧಪಟ್ಟಂತೆ ಇರುವ ತಕರಾರಿನ ಬಗ್ಗೆ ಇರುವ ದಾಖಲೆಗಳನ್ನು ಒದಗಿಸುವಂತೆಯೂ ಶಶಿಕಲಾ ಬಣ ಮನವಿ ಮಾಡಿತ್ತು.

ಚುನಾವಣಾ ಆಯೋಗವು ಈ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಕೇವಲ ವ್ಯತಿರಿಕ್ತ ಹೇಳಿಕೆಯನ್ನು ನೀಡಿದ್ದು ಮಾತ್ರವಲ್ಲ ಗಂಭೀರ ಅಕ್ರಮಗಳನ್ನೂ ಮಾಡಿದೆ ಎಂದು ಉಪ್ಪಲ್ ನ್ಯಾಯಾಲಯಕ್ಕೆ ವಿವರಿಸಿದರು. ಅವರ ಜೊತೆ ಇನ್ನೋರ್ವ ವಕೀಲ ಅಮಿತ್ ಆನಂದ್ ತಿವಾರಿ ಕೂಡಾ ಉಪಸ್ಥಿತರಿದ್ದರು. ಚುನಾವಣಾ ಆಯೋಗದ ಈ ಆದೇಶವು ಆಸ್ತಿ ಅವ್ಯವಹಾರ ಆರೋಪದಡಿ ಸದ್ಯ ಬೆಂಗಳೂರಿನ ಜೈಲಿನಲ್ಲಿ ನಾಲ್ಕು ವರ್ಷಗಳ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಮತ್ತು ದಿನಕರನ್‌ಗೆ ತೀವ್ರ ಹಿನ್ನಡೆಯುಂಟುಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News