ತ್ರಿವಳಿ ತಲಾಖ್ ವಿರುದ್ಧ ಕಠಿಣ ಕಾಯ್ದೆ ಜಾರಿಗೆ ಚಿಂತನೆ

Update: 2017-12-01 16:43 GMT

ಹೊಸದಿಲ್ಲಿ, ಡಿ.1: ತ್ರಿವಳಿ ತಲಾಖ್ ಪದ್ದತಿಯ ವಿರುದ್ಧ ನಿಟ್ಟಿನಲ್ಲಿ ಕಠಿಣ ಕಾಯ್ದೆಯೊಂದನ್ನು ಜಾರಿಗೊಳಿಸಲು ಸರಕಾರ ನಿರ್ಧರಿಸಿದ್ದು, ಪ್ರಸ್ತಾವಿತ ಕಾಯ್ದೆ ಪ್ರಕಾರ ದಿಢೀರ್ ತ್ರಿವಳಿ ತಲಾಖ್ ನೀಡುವುದು ಜಾಮೀನುರಹಿತ, ಗುರುತಿಸಬಹುದಾದ ಅಪರಾಧವಾಗಿರುತ್ತದೆ.

‘ಮುಸ್ಲಿಮ್ ಮಹಿಳೆಯರ ವಿವಾಹ ಹಕ್ಕು ರಕ್ಷಣೆ ಕಾಯ್ದೆ’ಯ ಕರಡು ಪ್ರತಿಯನ್ನು ಗೃಹ ಸಚಿವ ರಾಜ್ ನಾಥ್ ಸಿಂಗ್ ನೇತೃತ್ವದ ಅಂತರ್ ಸಚಿವ ತಂಡ ರಚಿಸಿದ್ದು, ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೋರಿ ರಾಜ್ಯ ಸರಕಾರಗಳಿಗೆ ಕಳುಹಿಸಿಕೊಡಲಾಗಿದೆ. ರಾಜ್ಯ ಸರಕಾರಗಳ ಅಭಿಪ್ರಾಯವನ್ನು ಸಂಗ್ರಹಿಸಿದ ಬಳಿಕ ಇದನ್ನು ಸಂಪುಟ ಸಭೆಯಲ್ಲಿ ಮಂಡಿಸಲಾಗುತ್ತದೆ.

   ಯಾವುದೇ ರೀತಿಯಲ್ಲಿ, ಅಂದರೆ ಬಾಯಿ ಮಾತಿನಲ್ಲಿ, ಲಿಖಿತವಾಗಿ ಅಥವಾ ಇ-ಮೇಲ್, ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ನೀಡುವುದು ಕಾನೂನು ಬಾಹಿರ ಮತ್ತು ಅಸಿಂಧುವಾಗಿದೆ. ಈ ಪ್ರಸ್ತಾವಿತ ಕಾನೂನು ಕೇವಲ ದಿಢೀರ್ ತ್ರಿವಳಿ ತಲಾಖ್ ಪ್ರಕರಣಗಳಿಗೆ ಮಾತ್ರ ಅನ್ವಯವಾಗುತ್ತದೆ ಮತ್ತು ಸಂತ್ರಸ್ತೆ ತನಗೆ ಹಾಗೂ ತನ್ನ ಅಪ್ರಾಪ್ತ ಮಕ್ಕಳಿಗೆ ‘ಜೀವನೋಪಾಯ ಭತ್ಯೆ’ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಅವಕಾಶ ನೀಡುತ್ತದೆ. ಅಲ್ಲದೆ ಮಕ್ಕಳನ್ನು ತನ್ನ ವಶಕ್ಕೆ ಪಡೆದುಕೊಳ್ಳಲೂ ಸಂತ್ರಸ್ತೆ ನ್ಯಾಯಾಲಯದಲ್ಲಿ ಮನವಿ ಮಾಡಿಕೊಳ್ಳಬಹುದಾಗಿದೆ.

  ತ್ರಿವಳಿ ತಲಾಖ್ ಪದ್ದತಿಯನ್ನು ಸುಪ್ರೀಂಕೋರ್ಟ್ ಅಸಿಂಧುಗೊಳಿಸಿದ್ದರೂ ಈ ಪದ್ದತಿ ಇನ್ನೂ ಮುಂದುವರಿದಿದೆ. ಸುಪ್ರೀಂಕೋರ್ಟ್ ಆದೇಶಿಸಿದ ಬಳಿಕವೂ ಈ ವರ್ಷ ವಿವಿಧ ರಾಜ್ಯಗಳಲ್ಲಿ ಒಟ್ಟು 66 ತ್ರಿವಳಿ ತಲಾಖ್ ಪ್ರಕರಣ ದಾಖಲಾಗಿದ್ದು, ಉತ್ತರಪ್ರದೇಶ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಕಾನೂನನ್ನು ಜಾರಿಗೊಳಿಸಲು ಸರಕಾರ ಉದ್ದೇಶಿಸಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News