ಮೊದಲ ಬಾರಿ ‘ರೊಹಿಂಗ್ಯಾ’ ಪದ ಬಳಸಿದ ಪೋಪ್

Update: 2017-12-01 17:03 GMT

ಢಾಕಾ (ಬಾಂಗ್ಲಾದೇಶ), ಡಿ. 1: ಪೋಪ್ ಫ್ರಾನ್ಸಿಸ್ ತನ್ನ ಹಾಲಿ ಏಶ್ಯ ಪ್ರವಾಸದ ವೇಳೆ ಶುಕ್ರವಾರ ಮೊದಲ ಬಾರಿಗೆ ‘ರೊಹಿಂಗ್ಯಾ’ ಪದವನ್ನು ಬಳಸಿದ್ದಾರೆ.

ಮ್ಯಾನ್ಮಾರ್ ಗಡಿ ಸಮೀಪದ ಕಾಕ್ಸ್ ಬಝಾರ್‌ನ ಶಿಬಿರಗಳಿಂದ ಬಾಂಗ್ಲಾದೇಶ ರಾಜಧಾನಿ ಢಾಕಾಕ್ಕೆ ತರಲಾದ 16 ನಿರಾಶ್ರಿತರನ್ನು ಭೇಟಿಯಾದ ಬಳಿಕ ಮಾತನಾಡಿದ ಪೋಪ್, ‘‘ದೇವರ ಇಂದಿನ ಉಪಸ್ಥಿತಿಯನ್ನು ರೊಹಿಂಗ್ಯಾ ಎಂಬುದಾಗಿಯೂ ಕರೆಯಲಾಗುತ್ತದೆ’’ ಎಂದರು.

‘‘ನಿಮ್ಮನ್ನು ಹಿಂಸಿಸಿದ, ನೋಯಿಸಿದವರ ಹೆಸರಿನಲ್ಲಿ ನಾನು ಕ್ಷಮೆ ಕೇಳುತ್ತೇನೆ. ನಾವು ಕೇಳಿದ ಕ್ಷಮೆಯನ್ನು ನೀಡುವಂತೆ ನಿಮ್ಮ ಉದಾತ್ತ ಹೃದಯಗಳಿಗೆ ನಾನು ಮನವಿ ಮಾಡುತ್ತೇನೆ’’ ಎಂದು ಫ್ರಾನ್ಸಿಸ್ ಹೇಳಿದರು.

 ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಸೇನೆ ನಡೆಸಿದ ದಮನ ಕಾರ್ಯಾಚರಣೆಗೆ ಬೆದರಿ ಆಗಸ್ಟ್ ತಿಂಗಳಿನಿಂದ 6.20 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

12 ರೊಹಿಂಗ್ಯಾ ಪುರುಷರು, ಇಬ್ಬರು ಚಿಕ್ಕ ಹುಡುಗಿಯರು ಸೇರಿದಂತೆ ನಾಲ್ವರು ಮಹಿಳೆಯರು ತಮ್ಮ ಯಾತನೆಯ ಕತೆಗಳನ್ನು ಪೋಪ್‌ಗೆ ವಿವರಿಸಿದರು. ಭಾಷಾಂತರಕಾರರ ಮೂಲಕ ಅವರ ಕತೆಗಳನ್ನು ತಿಳಿದುಕೊಂಡ ಪೋಪ್ ದುಃಖ ವ್ಯಕ್ತಪಡಿಸಿದರು.

ಬಾಂಗ್ಲಾದೇಶಕ್ಕೆ ಭೇಟಿ ನೀಡುವ ಮುನ್ನ ಅವರು ಮ್ಯಾನ್ಮಾರ್‌ಗೆ ಭೇಟಿ ನೀಡಿದ್ದರು. ಅಲ್ಲಿ ಅವರು ನಿರಾಶ್ರಿತರನ್ನು ವಿವರಿಸಲು ‘ರೊಹಿಂಗ್ಯಾ’ ಪದವನ್ನು ಬಳಸಿರಲಿಲ್ಲ.

ಮ್ಯಾನ್ಮಾರ್ ಸರಕಾರ ಮತ್ತು ಸೇನೆ ‘ರೊಹಿಂಗ್ಯಾ’ ಪದವನ್ನು ಬಳಸುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News