ಇರಾನ್ ನಲ್ಲಿ ಪ್ರಬಲ ಭೂಕಂಪ: ಕನಿಷ್ಠ 42 ಮಂದಿಗೆ ಗಾಯ
Update: 2017-12-01 22:47 IST
ಅಂಕಾರ, ಡಿ. 1: ರಿಕ್ಟರ್ ಮಾಪಕದಲ್ಲಿ 6ರ ತೀವ್ರತೆ ಹೊಂದಿದ ಪ್ರಬಲ ಭೂಕಂಪ ಶುಕ್ರವಾರ ಇರಾನ್‌ನ ಆಗ್ನೇಯ ಭಾಗದಲ್ಲಿ ಸಂಭವಿಸಿದ್ದು, ಕನಿಷ್ಠ 42 ಮಂದಿ ಗಾಯಗೊಂಡಿದ್ದಾರೆ ಹಾಗೂ ಹಲವಾರು ಮನೆಗಳು ಕುಸಿದಿವೆ.
ಆದಾಗ್ಯೂ, ಯಾವುದೇ ಸಾವು ಸಂಭವಿಸಿಲ್ಲ ಎಂದು ಇರಾನ್‌ನ ಅರೆ ಸರಕಾರಿ ಸುದ್ದಿ ಸಂಸ್ಥೆ ‘ಫಾರ್ಸ್’ ವರದಿ ಮಾಡಿದೆ.
ಬೆಳಗ್ಗೆ 6:32ಕ್ಕೆ ಭೂಕಂಪ ಸಂಭವಿಸಿದ ಬಳಿಕ ಸುಮಾರು 30 ಪಶ್ಚಾತ್ ಕಂಪನಗಳು ಸಂಭವಿಸಿದವು. ಆಗ ಕರ್ಮನ್ ನಗರ ಮತ್ತು ಸಮೀಪದ ಹಳ್ಳಿಗಳ ಜನರು ತಮ್ಮ ಮನೆಗಳಿಂದ ಹೊರಗೋಡಿದರು ಎಂದು ಸರಕಾರಿ ಟಿವಿ ತಿಳಿಸಿದೆ.
ಭೂಕಂಪದ ಕೇಂದ್ರ ಬಿಂದು ಕರ್ಮನ್ ನಗರದಿಂದ 58 ಕಿ.ಮೀ. ಈಶಾನ್ಯದಲ್ಲಿತ್ತು ಎಂದು ಯುಎಸ್ ಜಿಯಾಲಜಿಕಲ್ ಸರ್ವೆ ಹೇಳಿದೆ.