ಕ್ರಾಂತಿದೂತ ಪ್ರವಾದಿ ಮುಹಮ್ಮದ್(ಸ)

Update: 2017-12-01 18:25 GMT

ಪ್ರವಾದಿ ಮುಹಮ್ಮದ್ (ಸ)ರ ಸಂಗಾತಿ ಅನಸ್‌ಬಿನ್‌ಮಾಲಿಕ್(ರ) ಹೇಳುತ್ತಾರೆ;

‘‘ಒಂದು ದಿನ ನಾವು ದೇವದೂತ(ಪ್ರವಾದಿ ಮುಹಮ್ಮದ್ .ಸ.)ರ ಜೊತೆ ಮಸೀದಿಯಲ್ಲಿದ್ದೆವು. ಅಲ್ಲಿಗೆ ಬಂದ ಮರಳುಗಾಡಿನ ಹಳ್ಳಿಗನೊಬ್ಬ ಮಸೀದಿಯೊಳಗೇ ಮೂತ್ರ ವಿಸರ್ಜನೆ ಮಾಡಲಾರಂಭಿಸಿದ. ಮಾನ್ಯ ದೇವದೂತರ ಸಂಗಾತಿಗಳೆಲ್ಲಾ ಇದನ್ನು ಕಂಡು ‘‘ನಿಲ್ಲಿಸು, ನಿಲ್ಲಿಸು’’ ಎಂದು ಕೂಗತೊಡಗಿದರು. ಆದರೆ ದೇವದೂತರು, ‘‘ಅವನನ್ನು ಮಧ್ಯದಲ್ಲಿ ತಡೆಯಬೇಡಿ. ಅವನ ಪಾಡಿಗೆ ಬಿಟ್ಟುಬಿಡಿ’’ ಎಂದು ಆದೇಶಿಸಿದರು. ಆತನು ಮೂತ್ರ ವಿಸರ್ಜಿಸಿ ಮುಗಿಸಿದ ಬಳಿಕ ಅಲ್ಲಾಹನ ದೂತರು ಆತನನ್ನು ತಮ್ಮ ಬಳಿಗೆ ಕರೆದು, ‘‘ಮಸೀದಿಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದು ಸರಿಯಲ್ಲ. ಮಸೀದಿಗಳಿರುವುದು ಅಲ್ಲಾಹನನ್ನು ಸ್ಮರಿಸುವುದಕ್ಕೆ ಹಾಗೂ ಕುರ್‌ಆನ್‌ನ ಅಧ್ಯಯನ ನಡೆಸುವುದಕ್ಕೆ’’ ಎಂದು ಉಪದೇಶಿಸಿದರು. ಆ ಬಳಿಕ ಅವರು ತಮ್ಮ ಸಂಗಾತಿಗಳೊಡನೆ ನೀರು ತರಲು ಹೇಳಿದರು ಮತ್ತು ಆ ಸ್ಥಳವನ್ನು ಶುಚೀಕರಿಸಿದರು.’’

(ಬುಖಾರಿ, ಮುಸ್ಲಿಮ್)

***

ಪ್ರವಾದಿ ಮುಹಮ್ಮದ್ (ಸ)ರ ಸಂಗಾತಿ ಅಬ್ದುಲ್ಲಾಹ್ ಬಿನ್ ಉಮರ್ (ರ) ಹೇಳುತ್ತಾರೆ;

‘‘ಅಲ್ಲಾಹನ ದೂತರು (ಪ್ರವಾದಿ ಮುಹಮ್ಮದ್.ಸ.) ಎಂದೂ ಯಾರನ್ನೂ ಅಪಮಾನಿಸುವಂತಹ ಮಾತುಗಳನ್ನು ಆಡುತ್ತಿರಲಿಲ್ಲ. ‘‘ನಿಮ್ಮ ಪೈಕಿ, ಅತ್ಯುತ್ತಮ ಚಾರಿತ್ರ ಉಳ್ಳವರು ಹಾಗೂ ಅತ್ಯಂತ ಸೌಜನ್ಯಶೀಲರೇ ನನಗೆ ಅತ್ಯಧಿಕ ಪ್ರಿಯರು’’ ಎಂದು ಅವರು ಹೇಳುತ್ತಿದ್ದರು.’’

(ಬುಖಾರಿ)

***

ಪ್ರವಾದಿ ಮುಹಮ್ಮದ್ (ಸ)ರ ಸಂಗಾತಿ ಖತಾದಃ ಬಿನ್ ಮಾಲಿಕ್(ರ) ಹೇಳುತ್ತಾರೆ;

‘‘ಓ ಅಲ್ಲಾಹ್, ದುಷ್ಟ ಚಾರಿತ್ರ, ದುಷ್ಟ ಕೃತ್ಯಗಳು ಮತ್ತು ದುರಾಶೆಯಿಂದ ನನ್ನನ್ನು ಕಾಪಾಡು-ಎಂದು ಅಲ್ಲಾಹನ ದೂತರು (ಪ್ರವಾದಿ ಮುಹಮ್ಮದ್.ಸ.) ನಿತ್ಯ ಪ್ರಾರ್ಥಿಸುತ್ತಿದ್ದರು’’.

(ತಿರ್ಮಿಝಿ)

***

ಅಬ್ದುಲ್ಲಾಹ್ ಬಿನ್ ಉಮರ್ (ರ) ಎಂಬ ಸಂಗಾತಿ ಹೇಳುತ್ತಾರೆ.

ಪ್ರವಾದಿ ವರ್ಯರು (ಸ) ಒಮ್ಮೆ ನನ್ನನ್ನು ಕರೆದು, ‘‘ಓ ಅಬ್ದುಲ್ಲಾಹ್, ನೀವು ಹಗಲಿಡೀ ಉಪವಾಸ ಆಚರಿಸಿ, ರಾತ್ರಿಯೆಲ್ಲಾ ಆರಾಧನೆಯಲ್ಲಿ ಕಳೆಯುವ ವಿಷಯ ನನಗೆ ತಿಳಿಯದೇ?’’ ಎಂದು ಕೇಳಿದರು.’’ ಹೌದು ನಾನು ಹಾಗೆಯೇ ಮಾಡುತ್ತೇನೆ’’ ಎಂದು ನಾನು ಉತ್ತರಿಸಿದೆ. ಆಗ ಪ್ರವಾದಿ (ಸ) ಹೇಳಿದರು;

‘‘ಹಾಗೆ ಮಾಡಬೇಡಿ. ನೀವು ಕೆಲವೊಮ್ಮೆ ಉಪವಾಸ ಆಚರಿಸಿ, ಕೆಲವೊಮ್ಮೆ ಆಚರಿಸಬೇಡಿ. ರಾತ್ರಿ ನಮಾಝನ್ನೂ ಸಲ್ಲಿಸಿರಿ, ವಿಶ್ರಾಂತಿಯನ್ನೂ ಪಡೆಯಿರಿ- ಏಕೆಂದರೆ ನಿಮ್ಮ ಶರೀರದ ಬಗ್ಗೆ ನಿಮಗೆ ಬಾಧ್ಯತೆ ಇದೆ, ನಿಮ್ಮ ಕಣ್ಣಿನ ಬಗ್ಗೆ ನಿಮಗೆ ಬಾಧ್ಯತೆ ಇದೆ, ನಿಮ್ಮ ಪತ್ನಿಯ ಬಗ್ಗೆ ನಿಮಗೆ ಬಾಧ್ಯತೆ ಇದೆ. ನಿಮ್ಮ ಅತಿಥಿಯ ಬಗ್ಗೆಯೂ ನಿಮಗೆ ಬಾಧ್ಯತೆ ಇದೆ. ನಿಜವಾಗಿ, ಜೀವನವೆಲ್ಲಾ ಉಪವಾಸ ಆಚರಿಸಿದವನು ಎಂದೂ ಉಪವಾಸವನ್ನೇ ಆಚರಿಸದವನಿಗೆ ಸಮಾನನಾಗಿರುತ್ತಾನೆ. ನೀವು ಪ್ರತೀ ತಿಂಗಳು ಮೂರು ಉಪವಾಸಗಳನ್ನು ಆಚರಿಸಿದರೆ ಸಾಕು. ಅದು ಜೀವನವೆಲ್ಲಾ ಉಪವಾಸ ಆಚರಿಸಿದ್ದಕ್ಕೆ ಸಮನಾಗಿರುವುದು. ಹಾಗೆಯೇ ತಿಂಗಳಿಗೊಮ್ಮೆ (ಪೂರ್ಣ) ಕುರ್‌ಆನ್ ಓದಿರಿ.’’

‘‘ನನಗೆ ಇದಕ್ಕಿಂತ ಹೆಚ್ಚಿನದನ್ನು ಮಾಡುವ ಸಾಮರ್ಥ್ಯ ಇದೆ’’ ಎಂದು ನಾನು ಹೇಳಿದೆ. ಪ್ರವಾದಿ (ಸ)ಹೇಳಿದರು;

‘‘ಹಾಗಾದರೆ ನೀವು ಪ್ರವಾದಿ ದಾವೂದ್(ಅ)ರಂತೆ ಉಪವಾಸ ಆಚರಿಸಿರಿ. ಅದು ಐಚ್ಛಿಕ ಉಪವಾಸದ ಆತ್ಯುತ್ತಮ ರೂಪ. ಅಂದರೆ ಒಂದು ದಿನ ಉಪವಾಸ ಆಚರಿಸಿ, ಮರುದಿನ ಆಚರಿಸಬೇಡಿ. ಹಾಗೆಯೇ ವಾರಕ್ಕೊಮ್ಮೆ (ಪೂರ್ಣ) ಕುರ್‌ಆನ್ ಓದಿರಿ. ಅದಕ್ಕಿಂತ ಮುಂದೆ ಹೋಗಬೇಡಿ.’’

(ಬುಖಾರಿ, ಮಿಶ್ಕಾತ್)

***

ಒಮ್ಮೆ ಪ್ರವಾದಿ ವರ್ಯರು (ಸ), ತಮ್ಮ ಸಂಗಾತಿ ಅಬೂ ಮಸ್‌ಊದ್ ಅನ್ಸಾರಿ, ತನ್ನ ದಾಸನಿಗೆ ಥಳಿಸುವುದನ್ನು ದೂರದಿಂದ ಕಂಡರು ಮತ್ತು ‘‘ಕೇಳು, ಕೇಳು’’ ಎನ್ನುತ್ತಾ ಧಾವಿಸಿ ಅವರ ಬಳಿಗೆ ಹೋಗಿ, ‘‘ಓ ಅಬೂ ಮಸ್‌ಊದ್! ಈ ದಾಸನ ಮೇಲೆ ನಿಮಗೆ ಇರುವುದಕ್ಕಿಂತ ಹೆಚ್ಚಿನ ನಿಯಂತ್ರಣ ಅಲ್ಲಾಹನಿಗೆ ನಿಮ್ಮ ಮೇಲಿದೆ’’ ಎಂದರು. ಈ ಮಾತು ಕೇಳಿ ಭಯದಿಂದ ನಡುಗಿದ ಅಬೂ ಮಸ್‌ಊದ್(ರ) ‘‘ಅಲ್ಲಾಹನ ದೂತರೇ, ನಾನು ಈ ಕ್ಷಣದಲ್ಲೇ ಈ ದಾಸನನ್ನು ಸ್ವತಂತ್ರಗೊಳಿಸುತ್ತಿದ್ದೇನೆ’’ ಎಂದರು. ಆಗ ಪ್ರವಾದಿ (ಸ) ಹೇಳಿದರು; ‘‘ಆತನನ್ನು ನೀವು ಸ್ವತಂತ್ರಗೊಳಿಸದೆ ಇದ್ದಿದ್ದರೆ ನೀವು ನರಕಾಗ್ನಿಗೆ ತುತ್ತಾಗುತ್ತಿದ್ದಿರಿ’’

(ಅಬೂ ದಾವೂದ್)

***

ಒಮ್ಮೆ ಇಬಾದ್ ಬಿನ್ ಶರ್ಜೀಲ್ ಎಂಬೋರ್ವ ತೀರಾ ಬಡವ್ಯಕ್ತಿ ಒಂದು ತೋಟದೊಳಗೆ ನುಗ್ಗಿ ಕೆಲವು ಹಣ್ಣುಗಳನ್ನು ತಿಂದನು. ತೋಟದ ಮಾಲಕನು ಆತನಿಗೆ ಥಳಿಸಿ ಆತನು ಧರಿಸಿದ್ದ ಬಟ್ಟೆಬರೆಗಳನ್ನು ಕಿತ್ತುಕೊಂಡನು. ಈ ವಿಷಯ ಪ್ರವಾದಿ ವರ್ಯ(ಸ)ರಿಗೆ ತಿಳಿದಾಗ ಅವರು ತೋಟದ ಮಾಲಕನೊಡನೆ ಹೇಳಿದರು: ‘‘ಅವನು ಬುದ್ಧಿ ಇಲ್ಲದವನು. ನೀವು ಅವನಿಗೆ ಬುದ್ಧಿ ಹೇಳಬೆಕಿತ್ತು. ಅವನು ಹಸಿದಿದ್ದನು. ನೀವು ಅವನಿಗೆ ತಿನ್ನಲು ಕೊಡಬೇಕಿತ್ತು. ನೀವೀಗ ಅವನ ಬಟ್ಟೆಬರೆಗಳನ್ನು ಅವನಿಗೆ ಮರಳಿಸಿರಿ ಮತ್ತು ಒಂದಿಷ್ಟು ದವಸ ಧಾನ್ಯಗಳನ್ನು ಅವನಿಗೆ ದಾನ ಮಾಡಿರಿ’’

 (ಅಬೂ ದಾವೂದ್)

***

ಬದ್ರ್ ಯುದ್ಧದಲ್ಲಿ ಮುಸ್ಲಿಮರ ಸೇನೆ, ಶಕ್ತಿ ಶಾಲಿ ವಿರೋಧಿಗಳ ಆಕ್ರಮಣಶೀಲ ಸೇನೆಯನ್ನು ಸೋಲಿಸಿತು. ಶತ್ರುಪಾಳಯದ ಹಲವು ಮಂದಿ ಯುದ್ಧ ಕೈದಿಗಳಾಗಿ ಮುಸ್ಲಿಮರ ವಶಕ್ಕೆ ಬಂದರು. ಪ್ರವಾದಿ ಮುಹಮ್ಮದ್(ಸ) ಅವರ ಪೈಕಿ ಕೆಲವು ಶಿಕ್ಷಿತರನ್ನು ಆರಿಸಿ, ನಿಮ್ಮಲ್ಲಿ ಪ್ರತಿಯೊಬ್ಬರು ಹತ್ತು ಮಂದಿ ನಿರಕ್ಷರಿ ಮುಸ್ಲಿಮರಿಗೆ ಅಕ್ಷರ ಕಲಿಸಿದರೆ ಅದನ್ನೇ ಪರಿಹಾರವೆಂದು ಪರಿಗಣಿಸಿ ನಿಮ್ಮನ್ನು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು. ಆ ಪ್ರಕಾರ ಅವರನ್ನು ಬಿಡುಗಡೆಗೊಳಿಸಲಾಯಿತು.

(ವರದಿ:ಅಬ್ದುಲ್ಲಾಹ್ ಬಿನ್ ಅಬ್ಬಾಸ್.ರ. - ಮುಸ್ನದ್ ಅಹ್ಮದ್)

***

ಪ್ರವಾದಿ ಮುಹಮ್ಮದ್ (ಸ) ಎಂಥವರು, ಹೇಗಿದ್ದರು ಇತ್ಯಾದಿಗಳ ಕುರಿತು ಅವರ ಅನುಯಾಯಿಗಳು, ನಿಕಟ ಸಂಗಾತಿಗಳು ಹಾಗೂ ಅವರ ಕುಟುಂಬದ ಸದಸ್ಯರು ನೀಡಿರುವ ಸಹಸ್ರಾರು ಹೇಳಿಕೆಗಳು ಇತಿಹಾಸದಲ್ಲಿ ದಾಖಲಾಗಿವೆ. ಆದರೆ ನಾವೀಗ, ಪ್ರವಾದಿ ಮುಹಮ್ಮದ್ (ಸ) ಕುರಿತು, ಅವರ ಪ್ರಾಣ ಶತ್ರುವಾಗಿದ್ದ ಅಬೂಸುಫ್ಯಾನ್ ಎಂಬ ವ್ಯಕ್ತಿ ನೀಡಿದ್ದ ಹೇಳಿಕೆಯನ್ನು ನೋಡೋಣ.

ಹಿನ್ನೆಲೆ: ತಮ್ಮ ನಲ್ವತ್ತರ ಹರೆಯದಲ್ಲಿ, ದೇವದೂತರಾಗಿ ನಿಯುಕ್ತರಾದ ಮುಹಮ್ಮದ್(ಸ), ದೇವದತ್ತ ಸತ್ಯವನ್ನು ಮನುಕುಲಕೆ ತಲುಪಿಸುವ ಕೆಲಸವನ್ನು ಆರಂಭಿಸಿದರು. ಕೆಲವೊಮ್ಮೆ ಅವರು ಜನರ ಮನೆಗಳಿಗೆ ಹೋಗಿ ಅಥವಾ ಖಾಸಗಿಯಾಗಿ ವ್ಯಕ್ತಿಗಳನ್ನು ಭೇಟಿಯಾಗಿ ಅಥವಾ ಪೇಟೆಗಳಲ್ಲಿ ನಿಂತು ಭಾಷಣಗಳನ್ನು ಮಾಡುವ ಮೂಲಕ ಸತ್ಯ ಸಂದೇಶವನ್ನು ಜನರ ಮುಂದಿಡುತ್ತಿದ್ದರು. ಸತ್ಯ ವಿರೋಧಿಗಳು ಅವರ ಈ ಶ್ರಮವನ್ನು ತಡೆಯಲು ಬೆದರಿಕೆ, ಒತ್ತಡ, ಬಯ್ಗುಳ, ನಿಂದೆ, ಕಿರುಕುಳ, ಬಹಿಷ್ಕಾರ, ಹಲ್ಲೆ, ಚಿತ್ರಹಿಂಸೆ ಮುಂತಾದ ಸಕಲ ವಿಧಾನಗಳನ್ನೂ ಬಳಸಿದರು. ಆದರೆ ಪ್ರವಾದಿ (ಸ) ಎದೆಗುಂದದೆ ತಮ್ಮ ಕರ್ತವ್ಯವನ್ನು ನೆರವೇರಿಸಿದರು. ಕ್ರಮೇಣ ಸತ್ಯದ ಶತ್ರುಗಳೇ ಒಬ್ಬೊಬ್ಬರಾಗಿ ಸತ್ಯವನ್ನು ಅಂಗೀಕರಿಸಿ, ಪ್ರವಾದಿವರ್ಯ (ಸ)ರ ಪಾಳಯವನ್ನು ಸೇರಲಾರಂಭಿಸಿದರು. ಒಂದು ಹಂತದಲ್ಲಿ ಪ್ರವಾದಿವರ್ಯರು (ಸ) ಜಗತ್ತಿನ ವಿವಿಧ ದೇಶಗಳ ಆಡಳಿತಗಾರ ರನ್ನುದ್ದೇಶಿಸಿ, ಸತ್ಯ ಸಂದೇಶವನ್ನು ಪರಿಚಯಿಸುವ ಪತ್ರಗಳನ್ನು ಬರೆಸಿ ತಮ್ಮ ಪ್ರತಿನಿಧಿಗಳ ಮೂಲಕ ಅವುಗಳನ್ನು ಕಳಿಸಿಕೊಡಲಾರಂಭಿಸಿದರು.

ಕಾನ್‌ಸ್ಟಾಂಟಿನೋಪಲ್‌ನ ದೊರೆ ಹಿರಕ್ಕಲ್ (ಹಿರಾಕ್ಯುಲಸ್)ಗೆ ಕೂಡಾ ಅವರು ಅಂತಹದೊಂದು ಪತ್ರವನ್ನು ಕಳಿಸಿದ್ದರು. ದಿಹ್ಯಬಿನ್ ಖಲೀಫಾ ಕಲ್ಬೀ(ರ) ಎಂಬ ಪ್ರತಿನಿಧಿ ಪ್ರವಾದಿಯ (ಸ) ಪತ್ರವನ್ನು ದೊರೆ ಹಿರಕ್ಕಲ್‌ಗೆ ತಲುಪಿಸಿದರು. ದೊರೆಯು ಪತ್ರ ಸಿಕ್ಕಿದೊಡನೆ, ದರಬಾರನ್ನು ಆಯೋಜಿಸಿ, ಪ್ರವಾದಿವರ್ಯ(ಸ)ರ ವ್ಯಕ್ತಿತ್ವ, ಸಂದೇಶ ಇತ್ಯಾದಿಗಳ ಕುರಿತು, ಅವರ ಪ್ರತಿನಿಧಿಯೊಡನೆ ಹಲವು ವಿಷಯಗಳನ್ನು ವಿಚಾರಿಸಿದನು. ತರುವಾಯ ಅವನು, ‘‘ಮಕ್ಕಾದಿಂದ ಯಾರಾದರೂ ನಮ್ಮ ನಾಡಿಗೆ ಬಂದಿದ್ದರೆ ಅವರನ್ನು ನನ್ನ ಆಸ್ಥಾನದಲ್ಲಿ ಹಾಜರು ಪಡಿಸಿರಿ’’ ಎಂದು ತನ್ನ ಸೇವಕರಿಗೆ ಆದೇಶಿಸಿದನು. ಆತನ ಸೇವಕರು ಹುಡುಕಾಡಿದಾಗ, ಅಬೂಸುಫ್ಯಾನ್ ಮತ್ತು ಮಕ್ಕಾದ ಇತರ ಕೆಲವು ವರ್ತಕರು ಅವರಿಗೆ ಸಿಕ್ಕಿದರು. ಆ ಹಂತದಲ್ಲಿ ಅಬೂಸುಫ್ಯಾನ್, ಪ್ರವಾದಿ ಮುಹಮ್ಮದ್ (ಸ) ಹಾಗೂ ಅವರು ಪರಿಚಯಿಸಿದ ಧರ್ಮದ ಬದ್ಧ ಶತ್ರುವಾಗಿದ್ದರು. ಪ್ರವಾದಿ(ಸ)ಯ ಅನುಯಾಯಿಗಳ ವಿರುದ್ಧ ಎಲ್ಲ ಬಗೆಯ ಷಡ್ಯಂತ್ರಗಳನ್ನು ಮಾಡುವವರೆಂದೇ ಅವರು ಕುಖ್ಯಾತರಾಗಿದ್ದರು. (ಕೆಲವು ವರ್ಷಗಳ ಬಳಿಕ ಅವರು ಪ್ರವಾದಿವರ್ಯ(ಸ)ರ ಅನುಯಾಯಿಗಳಾದರು). ದೊರೆಯ ಸೇವಕರು ಅವರನ್ನು ದೊರೆಯ ಆಸ್ಥಾನದಲ್ಲಿ ಹಾಜರು ಪಡಿಸಿದರು. ದೊರೆಯು ಅಬೂಸುಫ್ಯಾನ್ ಜೊತೆಗಿದ್ದ ಇತರ ವರ್ತಕರನ್ನು ಪ್ರತ್ಯೇಕವಾಗಿ ಕರೆದು, ‘‘ನಾನು ಆತನೊಡನೆ ಕೆಲವು ಪ್ರಶ್ನೆಗಳನ್ನು ಕೇಳಲಿದ್ದೇನೆ. ಆತ ಸುಳ್ಳೇನಾದರೂ ಹೇಳಿದರೆ ನೀವು ನನಗೆ ಸೂಚನೆ ನೀಡಬೇಕು’’ ಎಂದು ಆದೇಶಿಸಿದನು. ಆನಂತರ ನಡೆದ ಸಂಭಾಷಣೆಯ ಸಾರಾಂಶ ಹೀಗಿದೆ;

ದೊರೆ: ಮುಹಮ್ಮದ್ (ಸ)ರ ವಂಶ ಎಂತಹದು?

ಅಬೂಸುಫ್ಯಾನ್ : ಅವರು ಅತ್ಯಂತ ಗೌರವಾನ್ವಿತ ವಂಶದವರು.

ದೊರೆ: ಮುಹಮ್ಮದ್ (ಸ)ರಿಗಿಂತ ಮುನ್ನ ನಿಮ್ಮ ನಾಡಿನಲ್ಲಿ ಯಾರಾದರೂ ತಾನು ದೇವದೂತನೆಂದು ಹೇಳಿಕೊಂಡದ್ದುಂಟೇ?

ಅಬೂಸುಫ್ಯಾನ್: ಇಲ್ಲ.

ದೊರೆ: ಮುಹಮ್ಮದ್ (ಸ) ತಾವು ದೇವದೂತರೆಂದು ಘೋಷಿಸುವ ಮುನ್ನ ಎಂದಾದರೂ ಸುಳ್ಳು ಹೇಳಿದ್ದುಂಟೇ? ಅಥವಾ ಅವರು ಸುಳ್ಳು ಹೇಳುವವರೆಂದು ಯಾರಾದರೂ ಆರೋಪಿಸಿದ್ದುಂಟೇ?

ಅಬೂಸುಫ್ಯಾನ್: ಇಲ್ಲ.

ದೊರೆ: ಅವರ ತಾತ ಮುತ್ತಾತಂದಿರಲ್ಲಿ ಯಾರಾದರೂ ದೊರೆಗಳಾಗಿದ್ದರೇ?

ಅಬೂಸುಫ್ಯಾನ್: ಇಲ್ಲ.

ದೊರೆ: ಮುಹಮ್ಮದ್ (ಸ)ರ ಅನುಯಾಯಿಗಳಲ್ಲಿ ಅಧಿಕ ಮಂದಿ ಎಂಥವರು? ತೀರಾ ಬಡ ಹಾಗೂ ದುರ್ಬಲ ವರ್ಗದವರೋ ಅಥವಾ ಶ್ರೀಮಂತ ಹಾಗೂ ನಾಯಕ ವರ್ಗದವರೋ?

ಅಬೂಸುಫ್ಯಾನ್ : ಅವರ ಅನುಯಾಯಿಗಳಲ್ಲಿ ಹೆಚ್ಚಿನವರು ಬಡವರು ಹಾಗೂ ತೀರಾ ಕೆಳವರ್ಗದವರು.

ದೊರೆ: ಮುಹಮ್ಮದ್ (ಸ)ರ ಅನುಯಾಯಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆಯೇ ಅಥವಾ ಕಡಿಮೆಯಾಗುತ್ತಿದ್ದೆಯೇ?

ಅಬೂಸುಫ್ಯಾನ್: ಹೆಚ್ಚುತ್ತಿದೆ.

ದೊರೆ: ಯಾರಾದರೂ ಅವರ ಧರ್ಮವನ್ನು ಸೇರಿದ ಬಳಿಕ ಅದನ್ನು ಬಿಟ್ಟು ಹೋಗುವುದುಂಟೇ?

ಅಬೂಸುಫ್ಯಾನ್: ಇಲ್ಲ.

ದೊರೆ: ಮುಹಮ್ಮದರು (ಸ) ಎಂದಾದರೂ ವಚನ ಭಂಗ ಮಾಡಿದ್ದುಂಟೇ?

ಅಬೂಸುಫ್ಯಾನ್ : ಇಲ್ಲ.

ದೊರೆ: ನಿಮ್ಮ ಕಡೆಯವರು ಮುಹಮ್ಮದ್ (ಸ) ರ ವಿರುದ್ಧ ಯುದ್ಧ ಮಾಡಿದ್ದುಂಟೇ?

ಅಬೂಸುಫ್ಯಾನ್ : ಹೌದು.

ದೊರೆ: ಯುದ್ಧಗಳ ಪರಿಣಾಮ ಏನಾಯಿತು?

ಅಬೂಸುಫ್ಯಾನ್: ಅವರು ಗೆದ್ದದ್ದೂ ಇದೆ. ನಾವು ಗೆದ್ದದ್ದೂ ಇದೆ.

ದೊರೆ: ಮುಹಮ್ಮದ್ (ಸ) ಏನನ್ನು ಬೋಧಿಸುತ್ತಾರೆ?

ಅಬೂಸುಫ್ಯಾನ್ : ಅಲ್ಲಾಹನೊಬ್ಬನನ್ನು ಮಾತ್ರ ಆರಾಧಿಸಬೇಕು, ತಾತ ಮುತ್ತಾತಂದಿರ ಕಾಲದ ದುಷ್ಟ ಸಂಪ್ರದಾಯಗಳನ್ನು ತೊರೆಯಬೇಕು. ನಮಾಝನ್ನು ಪಾಲಿಸಬೇಕು. ಉಪವಾಸ ಆಚರಿಸಬೇಕು, ಸತ್ಯ ನಿಷ್ಠರಾಗಬೇಕು, ಚಾರಿತ್ರ ನಿಷ್ಕಳಂಕವಾಗಿರಬೇಕು, ಬಾಂಧವ್ಯಗಳನ್ನು ಸಂರಕ್ಷಿಸಬೇಕು.

(ಸಹೀಹ್ ಬುಖಾರಿ)

***

ಪ್ರವಾದಿ ಮುಹಮ್ಮದ್ (ಸ) ರ ಒಬ್ಬ ಸಂಗಾತಿ ಅಬ್ದುಲ್ಲಾಹ್ ಬಿನ್ ಮಸ್‌ಊದ್ (ರ) ಹೇಳುತ್ತಾರೆ;

‘‘ಅಲ್ಲಾಹನ ದೂತರು (ಪ್ರವಾದಿ ಮುಹಮ್ಮದ್.ಸ) ಸಾಮಾನ್ಯವಾಗಿ ಹುಲ್ಲಿನ ಚಾಪೆಯಲ್ಲಿ ಮಲಗುತ್ತಿದ್ದರು. ಅವರು ನಿದ್ದೆಯಿಂದೇಳುವಾಗ ಅವರ ಬೆನ್ನಲ್ಲಿ ಚಾಪೆಯ ದೊರಗು ಗುರುತು ಎದ್ದು ಕಾಣುತ್ತಿತ್ತು. ಒಮ್ಮೆ ನಾನು ಅವರೊಡನೆ ‘‘ಅಲ್ಲಾಹನ ದೂತರೇ, ನಾವೆಲ್ಲಾ ನಿಮಗಾಗಿ ನುಣುಪಾದ ಒಂದು ಹಾಸಿಗೆಯನ್ನು ಒದಗಿಸಿದರೆ ಹೇಗೆ?’’ ಎಂದು ಪ್ರಶ್ನಿಸಿದೆ. ಅದಕ್ಕವರು ಹೇಳಿದರು; ಈ ಲೋಕದ ಸುಖದೊಂದಿಗೆ ನನಗೇನು ಸಂಬಂಧ? ನನ್ನ ಸ್ಥಿತಿಯು, ಮರದ ನೆರಳಲ್ಲಿ ವಿಶ್ರಾಂತಿ ಪಡೆಯುವ ಪ್ರಯಾಣಿಕನಂತಿದೆ. ಆತ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಅಲ್ಲಿಂದ ಹೊರಟು ಹೋಗುತ್ತಾನೆ.’’

(ತಿರ್ಮಿಝಿ)

***

ಮಕ್ಕಾ ಪಟ್ಟಣದಲ್ಲಿ ಮಖ್‌ಝೂಮ್ ಎಂಬ ಪ್ರತಿಷ್ಠಿತ ಗೋತ್ರದ ಮಹಿಳೆಯೊಬ್ಬಳು ಕಳವು ಮಾಡಿ ಸಿಕ್ಕಿಬಿದ್ದಳು. ವಿಚಾರಣೆಯ ಬಳಿಕ ಕಾನೂನು ಪ್ರಕಾರ ಆಕೆಯ ಕೈ ಕಡಿಯಲು ತೀರ್ಮಾನಿಸಲಾಯಿತು. ಆಗ ಆಕೆಯ ಬಂಧುಗಳು ಬಂದು, ಆಕೆ ಬಹಳ ಕುಲೀನ ಹಿನ್ನೆಲೆಯವಳಾದ್ದರಿಂದ ಆಕೆಯ ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಲಾರಂಭಿಸಿದರು. ಪ್ರವಾದಿ ಮುಹಮ್ಮದ್ (ಸ) ಈ ಒತ್ತಡಕ್ಕೆ ಮಣಿಯಲಿಲ್ಲ ಮಾತ್ರವಲ್ಲ, ಅವರು ಈ ಬಗೆಯಲ್ಲಿ ಒತ್ತಡ ಹೇರುವವರ ವಿರುದ್ಧ ತಮ್ಮ ಅಸಮಾಧಾನವನ್ನು ಪ್ರಕಟಿಸುತ್ತಾ, ಹೀಗೆಂದು ಘೋಷಿಸಿದರು;

‘‘ಈ ಹಿಂದೆ ಹಲವು ಜನಾಂಗಗಳು ನಾಶವಾಗಿವೆ. ಏಕೆಂದರೆ ಅವರು ತಮ್ಮಲ್ಲಿನ ಬಡ ಅಪರಾಧಿಗಳನ್ನು ದಂಡಿಸುತ್ತಿದ್ದರು ಹಾಗೂ ಶ್ರೀಮಂತರ ಅಪರಾಧಗಳನ್ನು ಕಡೆಗಣಿಸುತ್ತಿದ್ದರು. ಅಲ್ಲಾಹನಾಣೆ, ಸ್ವತಃ ನನ್ನ ಮಗಳು ಫಾತಿಮಾ ಕಳವು ಮಾಡಿದ್ದರೆ ಆಕೆಯ ಕೈಯನ್ನೂ ಕಡಿದು ಬಿಡಲಾಗುತ್ತಿತ್ತು.’’

(ಸಹೀಹ್ ಬುಖಾರಿ)

Writer - ಅಬ್ದುಸ್ಸಲಾಮ್ ಪುತ್ತಿಗೆ

contributor

Editor - ಅಬ್ದುಸ್ಸಲಾಮ್ ಪುತ್ತಿಗೆ

contributor

Similar News