ಭಾರತದಲ್ಲೇ ಇರುವ ಈ ವಿಶೇಷ ಸ್ಥಳಗಳಿಗೆ ಭಾರತೀಯರಿಗೆ ಪ್ರವೇಶವಿಲ್ಲ!

Update: 2017-12-02 11:04 GMT

ದೇಶಕ್ಕೆ ಸ್ವಾತಂತ್ರ ದೊರಕಿ 70 ವರ್ಷಗಳಾಗಿದ್ದರೂ ಭಾರತೀಯರಿಗೆ ಪ್ರವೇಶಾವಕಾಶವಿರದ ಮತ್ತು ಅವರನ್ನು ಪರಕೀಯರಂತೆ ನೋಡುವ ಕೆಲವು ಸ್ಥಳಗಳು ಈ ಭಾರತದಲ್ಲಿವೆ ಎನ್ನುವುದು ನಿಮಗೆ ಅಚ್ಚರಿಯನ್ನು ಮೂಡಿಸಬಹುದು. ಈ ಪೈಕಿ ಕೆಲವು ಸ್ಥಳಗಳು ಭಾರತೀಯರ ಒಡೆತನದಲ್ಲಿವೆ ಮತ್ತು ಹಾಗಿದ್ದರೂ ವಿದೇಶಿಯರಿಗೆ ಮಾತ್ರ ಪ್ರವೇಶಾವಕಾಶವಿದೆಯೇ ಹೊರತು ಭಾರತೀಯರಿಗಲ್ಲ ಎನ್ನುವುದು ನಿಜಕ್ಕೂ ದಿಗ್ಭ್ರಮೆಯನ್ನು ಹುಟ್ಟಿಸುತ್ತದೆ. ಜೊತೆಗೆ ಪ್ರವೇಶಕ್ಕೆ ಸರಕಾರದಿಂದ ವಿಶೇಷ ಅನುಮತಿ ಅಗತ್ಯವಾಗಿರು ಹಲವಾರು ಸ್ಥಳಗಳೂ ಇವೆ. ದೇಶದ ಉತ್ತರ ಮತ್ತು ಈಶಾನ್ಯ ಗಡಿಗಳ ಸಮೀಪದ ಕೆಲವು ಪ್ರದೇಶಗಳಿಗೆ ಭೇಟಿ ನೀಡಲು ಇನ್ನರ್ ಲೈನ್ ಪರ್ಮಿಟ್ ಅಗತ್ಯವಾಗಿದೆ.

ಫ್ರೀ ಕಸೋಲ್ ಕೆಫೆ, ಕಸೋಲ್

ಹಿಮಾಚಲ ಪ್ರದೇಶದ ಕಸೋಲ್ ಗ್ರಾಮದಲ್ಲಿರುವ ಈ ಕೆಫೆ 2015ರಲ್ಲಿ ವಿದೇಶಿ ಪಾಸ್‌ಪೋರ್ಟ್ ಹೊಂದಿರದ ಭಾರತೀಯರಿಗೆ ಸೇವೆಯನ್ನು ನಿರಾಕರಿಸುವ ಮೂಲಕ ಮೊದಲ ಬಾರಿಗೆ ಸುದ್ದಿಯಾಗಿತ್ತು. ಈ ಕೆಫೆಯು ಇಸ್ರೇಲಿಗಳ ಒಡೆತನದಲ್ಲಿದೆ.

ಉತ್ತರ ಸೆಂಟಿನೆಲ್ ದ್ವೀಪ, ಅಂಡಮಾನ್

ಈ ನಡುಗಡ್ಡೆಯು ಬಂಗಾಳ ಕೊಲ್ಲಿಯಲ್ಲಿರುವ ಅಂಡಮಾನ್-ನಿಕೋಬಾರ್ ದ್ವೀಪಸಮೂಹಕ್ಕೆ ಸೇರಿದೆ. ಆದರೆ ಮುಖ್ಯಭೂಮಿಯಿಂದ ಪ್ರತ್ಯೇಕಿಸಲ್ಪಟ್ಟಿದೆ. ಇದು ಅದ್ಭುತ ಬೀಚ್‌ಗಳು, ದಟ್ಟ ಅರಣ್ಯಗಳು ಮತ್ತು ಹವಳದ ದಿಬ್ಬಗಳಿಂದ ಸುತ್ತುವರಿಯಲ್ಪಟ್ಟಿರುವ ಪುಟ್ಟ ದ್ವೀಪವಾಗಿದೆ. ಈ ದ್ವೀಪವು ಪ್ರತ್ಯೇಕಿಸಲ್ಪಟ್ಟಿರುವುದು ತನ್ನ ಭೌಗೋಳಿಕ ಸ್ವರೂಪಗಳಿಂದಲ್ಲ, ಬದಲು ಅಲ್ಲಿಯ ಮೂಲನಿವಾಸಿಗಳಾದ ಸೆಂಟಿನಿಲೀಸ್ ಜನಾಂಗದಿಂದಾಗಿ. ಯಾವದೇ ಪ್ರವಾಸಿ ಅಥವಾ ಪರಕೀಯ ವ್ಯಕ್ತಿ ತಮ್ಮ ದ್ವೀಪವನ್ನು ಪ್ರವೇಶಿಸುವುದನ್ನು ಅವರು ಇಷ್ಟಪಡುವುದಿಲ್ಲ. 2004ರ ಸುನಾಮಿ ಸಂದರ್ಭ ಅಂಡಮಾನ್-ನಿಕೋಬಾರ್ ದ್ವೀಪ ಸಮೂಹದಲ್ಲಿ ಹಲವಾರು ಸಾವುಗಳು ಸಂಭವಿಸಿದ್ದರೂ ಸೆಂಟಿನಿಲಿಗಳು ತಮ್ಮನ್ನು ರಕ್ಷಿಸಿಕೊಳ್ಳುವಲ್ಲಿ ಸಮರ್ಥರಾಗಿದ್ದರು. ದ್ವೀಪದಲ್ಲಿ ಸಂಭವಿಸಿದ್ದ ನಷ್ಟದ ಅಂದಾಜನ್ನು ಕಂಡಿಕೊಳ್ಳಲು ಬಂದಿದ್ದ ಭಾರತೀಯ ತಟರಕ್ಷಣಾ ಪಡೆಯ ಹೆಲಿಕಾಪ್ಟರ್‌ಗಳ ಮೇಲೆ ಅವರು ಬಾಣಗಳಿಂದ ದಾಳಿ ನಡೆಸಿದ್ದರು.

ಚೆನ್ನೈನ ಹೋಟೆಲ್

 ಚೆನ್ನೈನಲ್ಲಿನ ಹೋಟೆಲ್‌ವೊಂದು ವಿದೇಶಿ ಪಾಸಪೋರ್ಟ್ ಹೊಂದಿರುವ ಗ್ರಾಹಕರಿಗೆ ಮಾತ್ರ ಸೇವೆ ನೀಡುತ್ತದೆ. ‘ಹೈಲ್ಯಾಂಡ್ಸ್’ ಅನ್ನು ಹೋಲುವ ಹೆಸರನ್ನು ಹೊಂದಿರುವ ಈ ಹೋಟೆಲ್ ‘ನೋ ಇಂಡಿಯನ್’ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಇದು ವಿದೇಶಿ ಪಾಸ್‌ಪೋರ್ಟ್ ಹೊಂದಿರುವವರಿಗೆ ಮಾತ್ರ ಮಣೆ ಹಾಕುವುದರಿಂದ ವಿದೇಶಿ ಪಾಸಪೋರ್ಟ್ ಇರುವ ಭಾರತೀಯರು ಮಾತ್ರ ಇಲ್ಲಿ ಉಳಿದುಕೊಳ್ಳಬಹುದು.

ಗೋವಾ ಮತ್ತು ಪುದುಚೇರಿಯ ಕೆಲವು ಬೀಚ್‌ಗಳು

ಗೋವಾದಲ್ಲಿಯ ಕೆಲವು ಖಾಸಗಿ ಬೀಚ್‌ಗಳು ಮತ್ತು ರೆಸ್ಟೋರಂಟ್‌ಗಳು ಭಾರತೀಯರಿಗಿಂತ ವಿದೇಶಿಯರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ‘ಫಾರಿನರ್ಸ್‌ ಓನ್ಲಿ’ಎಂಬ ಬೋರ್ಡ್‌ಗಳನ್ನೂ ತೂಗುಹಾಕಿಕೊಂಡಿವೆ. ಇದೇ ರೀತಿ ಪುದುಚೇರಿಯಲ್ಲಿ ಸುಂದರವಾದ ಫ್ರೆಂಚ್ ಮತ್ತು ಭಾರತೀಯ ವಾಸ್ತುಸೌಂದರ್ಯದಿಂದ ಸುತ್ತುವರಿಯಲ್ಪಟ್ಟಿರುವ ಕೆಲವು ಬೀಚ್‌ಗಳು ಮತ್ತು ರೆಸ್ಟೋರಂಟ್‌ಗಳು ವಿದೇಶಿಯರಿಗೆ ಮಾತ್ರ ಮೀಸಲಾಗಿವೆ.

ಲಕ್ಷದ್ವೀಪದಲ್ಲಿಯ ಕೆಲವು ದ್ವೀಪಗಳು

ನೀವು ಭಾರತೀಯರು ಅಥವಾ ವಿದೇಶಿಯರಾಗಿರಲಿ, ಲಕ್ಷದ್ವೀಪ ನಡುಗಡ್ಡೆಗಳ ಸಮೂಹದ ಕೆಲವು ದ್ವೀಪಗಳನ್ನು ಪ್ರವೇಶಿಸಲು ಸರಕಾರದಿಂದ ವಿಶೇಷ ಅನುಮತಿಯನ್ನು ಹೊಂದಿರಬೇಕಾಗುತ್ತದೆ. ವಿದೇಶಿಯರಿಗೆ ಅಗತ್ತಿ, ಕಡಮತ್ ಮತ್ತು ಬಂಗಾರಮ್ ದ್ವೀಪಗಳಿಗೆ ಮಾತ್ರ ಭೇಟಿ ನೀಡಲು ಅವಕಾಶವಿದ್ದರೆ, ಭಾರತೀಯರು ಮಿನಿಕಾಯ್ ಮತ್ತು ಅಮಿನಿಯಂತಹ ಇತರ ಸುಂದರ ದ್ವೀಪಗಳಿಗೂ ಭೇಟಿ ನೀಡಬಹುದು.

ಹಿ.ಪ್ರದೇಶದ ಮಲಾನಾ ಗ್ರಾಮ

ಇದೊಂದು ಪುರಾತನ ಗ್ರಾಮವಾಗಿದ್ದು, ಕ್ರಿ.ಪೂ.326ರಲ್ಲಿ ಅಲೆಕ್ಸಾಂಡರ್ ಈ ಗ್ರಾಮವನ್ನು ಸ್ಥಾಪಿಸಿದ್ದ ಎನ್ನಲಾಗಿದೆ. ಆಗ ಇಲ್ಲಿಯೇ ಉಳಿದುಕೊಂಡಿದ್ದ ಆತನ ಕೆಲವು ಗಾಯಾಳು ಸೈನಿಕರು ಈ ಗ್ರಾಮದ ನಿವಾಸಿಗಳ ಪೂರ್ವಜರು ಎಂದು ಪರಿಗಣಿಸಲಾಗಿದೆ. ಇಲ್ಲಿಯ ಗ್ರಾಮಸ್ಥರನ್ನು ‘ಟಚ್ ಮಿ ನಾಟ್’ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಏಕೆಂದರೆ ತಮ್ಮ ಸ್ವತ್ತುಗಳನ್ನು ಮುಟ್ಟಲು ಈ ಜನರು ಯಾರಿಗೂ ಅವಕಾಶ ನೀಡುವುದಿಲ್ಲ. ಈ ಗ್ರಾಮದಲ್ಲಿ ಯಾರಿಗೂ ಪ್ರವೇಶಕ್ಕೆ ಅವಕಾಶವಿಲ್ಲ. ಕಾನ್ಶಿ ಇಲ್ಲಿಯ ಭಾಷೆಯಾಗಿದ್ದು ಅದನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಹೊರಗಿನವರು ಅಸ್ಪಶ್ಯರು ಎಂದು ಇಲ್ಲಿಯ ಗ್ರಾಮಸ್ಥರು ಭಾವಿಸುತ್ತಾರೆ, ಅವರನ್ನು ತಮ್ಮ ದೇವಳಗಳಲ್ಲಿಯೂ ಬಿಟ್ಟುಕೊಳ್ಳುವುದಿಲ್ಲ. ಮಲಾನಾ ಜಲವಿದ್ಯುತ್ ಕೇಂದ್ರ ಈ ಗ್ರಾಮವನ್ನು ಹೊರಜಗತ್ತಿನೊಂದಿಗೆ ಬೆಸೆದಿದ್ದು, ಅದೊಂದೇ ಗ್ರಾಮದ ಆದಾಯ ಮೂಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News