ಪೋಷಕರಿಂದ ‘ಮಕ್ಕಳ ಅಪಹರಣ’ ಪ್ರಕರಣ: ಅರ್ಜಿ ಸ್ವೀಕರಿಸಿದ ಸುಪ್ರೀಂ
ಹೊಸದಿಲ್ಲಿ, ಡಿ.2: ‘ನಮ್ಮ ಮಗುವನ್ನು ಮನೆಗೆ ಮರಳಿಸಿ’ ಎಂಬ ಘೋಷಣೆಯಡಿ ಅಮೆರಿಕದಲ್ಲಿ ನೆಲೆಸಿರುವ ಪೋಷಕರ ತಂಡವೊಂದು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ.
ಅಮೆರಿಕದಲ್ಲಿ ನೆಲೆಸಿರುವ ಪತಿ ಅಥವಾ ಪತ್ನಿ ತನ್ನ ಸಂಗಾತಿಯನ್ನು ತೊರೆದು ಭಾರತಕ್ಕೆ ಬರುವಾಗ ತನ್ನೊಡನೆ ಮಗುವನ್ನೂ ಕರೆದುಕೊಂಡು ಬರುತ್ತಾರೆ. ಆ ಬಳಿಕ ವಿದೇಶದಲ್ಲಿರುವ ಮಗುವಿನ ಪೋಷಕ(ತಂದೆ ಅಥವಾ ತಾಯಿ)ರ ಸಂಪರ್ಕ ಇಲ್ಲದಂತೆ ಮಾಡುತ್ತಾರೆ ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಇಂತಹ ಪ್ರಕರಣಗಳು ಮಗುವಿನ ಮನಸ್ಸಿಗೆ ಆಘಾತ ಉಂಟು ಮಾಡುತ್ತವೆ ಮತ್ತು ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ‘ಪೋಷಕರಿಂದ ಮಕ್ಕಳ ಅಪಹರಣ’ ಪ್ರಕರಣವನ್ನು ನಿರ್ವಹಿಸಲು ಭಾರತದಲ್ಲಿ ಯಾವುದೇ ಕಾನೂನು ಇಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ವಿವಾಹಕ್ಕೆ ರಾಷ್ಟ್ರಗಳ ಗಡಿಯ ಕಟ್ಟುಪಾಡು ಇಲ್ಲ.ವೈಮನಸ್ಸಿನಿಂದ ಪರಸ್ಪರ ದೂರವಾಗಿರುವ ಪೋಷಕರು ತಮ್ಮ ಅಪ್ರಾಪ್ತ ಮಕ್ಕಳನ್ನು ಅಕ್ರಮವಾಗಿ ತಮ್ಮ ವಶದಲ್ಲಿ ಇರಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ರೋಹಿಂಟನ್ ಎಫ್.ನಾರಿಮನ್ ಮತ್ತು ನವೀನ್ ಸಿನ್ಹ ನೇತೃತ್ವದ ನ್ಯಾಯಪೀಠವು ಈ ಕುರಿತು ಸರಕಾರಕ್ಕೆ ನೋಟಿಸ್ ಜಾರಿಮಾಡಿದೆ.