ಮಫ್ತಿ: ಕ್ಲಾಸ್ ಮಾಸ್‌ಗೆ ಮನೋರಂಜನೆ ಭರ್ತಿ

Update: 2017-12-03 10:14 GMT

ಚಿಕ್ಕ ವಯಸ್ಸಿನಲ್ಲಿ ಪೋಲಿಯೋ ಡ್ರಾಪ್ ಹಾಕ್ಸಿದೀವಿ ಅಂತ ವಯಸ್ಸಿನಲ್ಲಿ ಮೆರೀಬಾರದು! ಅಂಗಾಂಗ ಊನವಾಗ್ಬಿಡುತ್ವೆ..! ಈ ಸಂಭಾಷಣೆಯನ್ನು ತುಂಬ ತಣ್ಣಗೆ ಹೇಳುತ್ತಾರೆ ಶ್ರೀಮುರಳಿ. ಹಾಗೆ ಮೆರೆದವರ ಅಂಗಾಗ ಊನ ಮಾಡುವ ವ್ಯಕ್ತಿ ಕೂಡ ಆತನೇ! ‘ಮಫ್ತಿ’ ಎಂಬ ಹೆಸರೇ ಸೂಚಿಸುವಂತೆ ಮಫ್ತಿ ವೇಷದಲ್ಲಿರುವ ಪೊಲೀಸ್ ಅಧಿಕಾರಿಯಾಗಿ ಒಬ್ಬ ಭೂಗತ ಪಾತಕಿಯನ್ನು ಬಂಧಿಸಲು ಹೊರಟಿರುತ್ತಾನೆ ಗಣ. ಇಲ್ಲಿ ಶ್ರೀಮುರಳಿಯ ಪಾತ್ರವೇ ಗಣ. ರೌಡಿಯ ವೇಷದಲ್ಲಿದ್ದುಕೊಂಡು ಮೂರು ವರ್ಷಗಳ ಕಾಲ ಪೊಲೀಸ್ ನಡೆಸುವ ಬೇಟೆ. ಎರಡು ವರ್ಷ ಮಂಗಳೂರಲ್ಲಿ ಕೆಲಸ ಮಾಡಿದ ಬಳಿಕ ಆತನನ್ನು ರೋಣಾಪುರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಆತನ ಕರ್ತವ್ಯ ಮೆಚ್ಚಿಕೊಂಡ ಭೂಗತ ಪಾತಕಿ ಭೈರತಿ ರಣಗಲ್ ಆತನನ್ನು ಭೇಟಿಯಾಗಲು ಬಯಸುತ್ತಾನೆ. ಹಾಗೆ ಗಣ ಮತ್ತು ಭೈರತಿ ರಣಗಲ್ ಭೇಟಿಯಾಗುವಾಗ ಚಿತ್ರ ಮಧ್ಯಂತರ ತಲುಪುತ್ತದೆ. ಅಲ್ಲಿಂದ ನಂತರ ಭೈರತಿ ರಣಗಲ್ ಪಾತ್ರವನ್ನು ಶಿವರಾಜ್ ಕುಮಾರ್ ಮೈದುಂಬಿಕೊಂಡಿರುವ ರೀತಿಯೇ ಪ್ರೇಕ್ಷಕರ ಮೈನವಿರೇಳಿಸುತ್ತಾ ಹೋಗುತ್ತದೆ.

‘ಉಗ್ರಂ’ ಚಿತ್ರದ ಬಳಿಕ ಶ್ರೀಮುರಳಿಯವರ ಇಮೇಜ್ ಬದಲಾಗಿದೆ. ಅಲ್ಲಿರುವ ಮಾಸ್ ನಾಯಕನ ಶೇಡ್ ಇಲ್ಲಿನ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿಯೂ ಇದೆ. ಮಾತ್ರವಲ್ಲ, ಚಿತ್ರದ ಛಾಯಾಗ್ರಹಣ, ವರ್ಣ ವಿನ್ಯಾಸ, ಹಿನ್ನೆಲೆ ನಿರೂಪಣೆ ಹೀಗೆ ಒಟ್ಟು ಚಿತ್ರದಲ್ಲಿ ‘ಉಗ್ರತನ’ ಎದ್ದು ಕಾಣುತ್ತದೆ. ಹಿನ್ನೆಲೆ ಸಂಗೀತವಂತೂ ಖುದ್ದು ‘ಉಗ್ರಂ’ ಖ್ಯಾತಿಯ ರವಿ ಬಸ್ರೂರು ನೀಡಿದ್ದಾರೆ ಎಂದಮೇಲೆ ಸಾಮ್ಯತೆ ಕಾಣುವುದು ತಪ್ಪಲ್ಲ. ಆದರೆ ಕತೆಯ ವಿಚಾರದಲ್ಲಿ ಇದು ಬೇರೆಯೇ ಚಿತ್ರ. ಕತೆ ಹೊಸದು ಎನ್ನುವುದಕ್ಕಿಂತ ಕತೆಯನ್ನು ನರ್ತನ್ ನಿರ್ದೇಶಿಸಿರುವ ರೀತಿ ಎಂಥವರನ್ನೂ ಆಕರ್ಷಿಸುವಂತಿದೆ.

ಭೈರತಿ ರಣಗಲ್ ಎನ್ನುವ ಹೆಸರಿನಿಂದ ಹಿಡಿದು ಕರಿ ಶರ್ಟು ಪಂಚೆಯಲ್ಲಿ ಕಾಣಿಸಿರುವ ಶಿವಣ್ಣನ ಹೊಸ ರೀತಿ, ನೀತಿ, ವರ್ತನೆಯ ಸಂಪೂರ್ಣ ಕ್ರೆಡಿಟ್ ನರ್ತನ್‌ಗೇ ಸಲ್ಲಬೇಕು. ಇಡೀ ಚಿತ್ರದಲ್ಲಿ ಶ್ರೀಮುರಳಿ ಅಥವಾ ಶಿವಣ್ಣನಿಂದ ಯಾವುದೇ ಸಂಭಾಷಣೆಗಳನ್ನು ಕಿರುಚುವಂತೆ ಅಥವಾ ಜೋರಾಗಿ ಹೇಳಿಸಿಲ್ಲ. ಶಿವಣ್ಣ ತಮ್ಮ ಕಣ್ಣೋಟ ಮತ್ತು ಸಾಲ್ಟ್ ಆ್ಯಂಡ್‌ಪೆಪ್ಪರ್ ಲುಕ್‌ನಿಂದಲೇ ಕೊಲ್ಲುತ್ತಾರೆ! ಅಂಡರ್ ಪ್ಲೇ ವಾಯ್ಸ್ ಮೂಲಕ ಬಂದ ಮಾತುಗಳನ್ನು ಪ್ರೇಕ್ಷಕರು ಕಿವಿ ನಿಮಿರಿಸಿ ಕೇಳುವಂತೆ ಮಾಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಕೇಳಿಸಿಕೊಂಡ ಸಂಭಾಷಣೆಗಳು ಅವರಿಗೆ ತೃಪ್ತಿ ನೀಡುವಂತೆ ಮಾಡುವಲ್ಲಿ ಡೈಲಾಗ್ ರಚಿಸಿರುವವರ ಪಾತ್ರವೂ ಪ್ರಮುಖವಾಗಿದೆ.

ಪರಿಸರವಾದಿ ಅಶ್ವಥ್ ಕುಡರಿಯ ಪಾತ್ರಕ್ಕೆ ಪ್ರಕಾಶ್ ಬೆಳವಾಡಿಯ ನಟನೆಯೇ ಒಂದು ತೂಕವಾದರೆ, ಅವರೊಂದಿಗೆ ಸಖ್ಯ ಸಾಧಿಸಲು ಬಯಸುವ ದೇವರಾಜ್ ನಿರ್ವಹಿಸಿರುವ ರಘುವೀರ್ ಬಂಡಿಯ ಪಾತ್ರ ವಿಕಸಿಸುವ ರೀತಿಯೇ ಚೆಲುವು. ಭೈರತಿ ರಣಗಲ್‌ನ ನಂಬಿಕಸ್ಥ ಬಂಟ ಕಾಶಿಯಾಗಿ ವಸಿಷ್ಠ ಸಿಂಹನ ಕ್ರೌರ್ಯ ಭಯ ಹುಟ್ಟಿಸುತ್ತದೆ. ಬಾಬು ಹಿರಣ್ಣಯ್ಯ ಮತ್ತೋರ್ವ ಬಂಟ ಶಬರಿ ರಾಮನಾಥ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದ ನಾಯಕಿ ಶಾನ್ವಿ ಶ್ರೀವಾತ್ಸವರ ಪಾತ್ರಕ್ಕೆ ವಿಶೇಷ ಅವಕಾಶಗಳಿಲ್ಲ. ಒಂದು ರೀತಿಯಲ್ಲಿ ಅವರ ಪಾತ್ರ ಮತ್ತು ಅದರೊಂದಿಗೆ ಬರುವ ಸಾಧು, ಚಿಕ್ಕಣ್ಣನ ಹಾಸ್ಯ ಸನ್ನಿವೇಶಗಳು ಕೂಡ ಚಿತ್ರಕ್ಕೆ ಅಗತ್ಯವಿರಲಿಲ್ಲ ಅನಿಸುತ್ತದೆ. ಅದೇ ಕಾರಣಕ್ಕೆ ಚಿತ್ರ ತುಸು ದೀರ್ಘವೆನಿಸಿದರೂ ಮತ್ತೆ ಟ್ರ್ಯಾಕ್‌ಗೆ ವಾಪಸಾಗುತ್ತದೆ.

ಈ ಚಿತ್ರದ ಮೂಲಕ ಮರಳಿ ಬಂದಿರುವ ಛಾಯಾಸಿಂಗ್ ಶಿವಣ್ಣನಿಗೆ ಸಹೋದರಿಯಾಗಿದ್ದಾರೆ. ಅಣ್ಣತಂಗಿಯ ಭಾವನಾತ್ಮಕ ಸನ್ನಿವೇಶಗಳನ್ನು ಹಳಸಲು ಕಮರ್ಷಿಯಲ್ ಫಾರ್ಮುಲಾದಲ್ಲಿ ತೋರದೆ ಕಲಾತ್ಮಕವಾಗಿ ನೀಡಿರುವುದು ನಿರ್ದೇಶಕರ ಜಾಣ್ಮೆಗೆ ಉದಾಹರಣೆ. ಅದೇ ಕಾರಣಕ್ಕೆ ಇದು ಬರಿಯ ಭೂಗತ ಲೋಕದ ಕತೆಯಾಗದೆ, ಮಣಿರತ್ನಂರ ‘ದಳಪತಿ’ಯಂತೆ ಮನತಟ್ಟುವಲ್ಲಿ ಯಶಸ್ವಿಯಾಗುತ್ತದೆ. ಕೊನೆಯದಾಗಿ ಶಿವರಾಜ್ ಕುಮಾರ್ ಅಭಿಮಾನಿಗಳ ಪಾಲಿಗೆ ಶಿವಣ್ಣ ತಮ್ಮ ಇದುವರೆಗಿನ ಎಲ್ಲ ಪಾತ್ರಗಳಿಗೆ ಮಫ್ತಿ ತೊಡಿಸಿ ಹೊಸ ರೀತಿಯಲ್ಲಿ ಕಾಣಿಸಿದ್ದಾರೆ. ಅದನ್ನು ಕಣ್ತುಂಬಿಕೊಳ್ಳುವುದೇ ಖುಷಿ.


ತಾರಾಗಣ: ಶಿವರಾಜ್ ಕುಮಾರ್, ಶ್ರೀಮುರಳಿ
ನಿರ್ದೇಶಕ: ನರ್ತನ್
ನಿರ್ಮಾಣ: ಜಯಣ್ಣ ಕಂಬೈನ್ಸ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News