'ಜ್ಯೋತಿರ್ಗಮಯ' ಧ್ವನಿಸಾಂದ್ರಿಕೆ ಬಿಡುಗಡೆ

Update: 2017-12-03 11:57 GMT

ಭಕ್ತಿ ಪ್ರಧಾನ ಚಿತ್ರ 'ಜ್ಯೋತಿರ್ಗಮಯ'ದ ಆಡಿಯೋ ಬಿಡುಗಡೆ ಕಾರ್ಯಕ್ರಮ ಗ್ರೀನ್ ಹೌಸ್ ನಲ್ಲಿ ನೆರವೇರಿತು.

ಇದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಗಾಣಗಟ್ಟೆ ಮಾಯಮ್ಮ ದೇವಿಯ ಭಕ್ತಿ ಪ್ರಧಾನ ಚಿತ್ರ. ಹಾಗಂತ ಮಾಹಿತಿ ನೀಡಿದವರು ನಿರ್ದೇಶಕ 
ನಾಗರಾಜ್. ಅವರು ನಿರ್ದೇಶಕರಾದ ಬಿ ರಾಮಮೂರ್ತಿ, ಆನಂದ್ ಪಿ ರಾಜು ಅವರಿಗೆ ಸಹಾಯಕ ನಿರ್ದೇಶಕನಾಗಿದ್ದರು. ಗಾಣಗಟ್ಟೆಯಲ್ಲಿ ನಡೆದ ಪವಾಡಗಳನ್ನು ಆಧಾರವಾಗಿಸಿ ಚಿತ್ರಕ್ಕೆ ಕಾಲ್ಪನಿಕ ಕತೆ ಬರೆದಿರುವುದಾಗಿ ಅವರು ತಿಳಿಸಿದರು. ಚಿತ್ರದಲ್ಲಿ ನಾಯಕನಿಗೆ ಸದಾ ಒಂದು ಕನಸು ಪುನರಾವರ್ತಿತವಾಗುತ್ತಿರುತ್ತದೆ. ರಥದ ಗಾಲಿಯೊಂದು ತನ್ನ ಎದೆಯ ಮೇಲೆ ಹತ್ತಿದಂತೆ ಬೀಳುವ ಆ ಕನಸು ಮಾಯಮ್ಮ ದೇವಿಯ ದರ್ಶನದಿಂದ ನಿವಾರಣೆಯಾಗುವುದೆಂಬ ಸಲಹೆ ಸಿಗುತ್ತದೆ. ಅದರಂತೆ ದೇವಿಯ ದರ್ಶನಕ್ಕೆ ಹೋಗಿ ಅರ್ಚಕನ ಮಾತಿನಂತೆ ವ್ರತ ಕೈಗೊಳ್ಳುವ ನಾಯಕ ಅರ್ಚಕನ‌ ಮಗಳನ್ನೇ ಇಷ್ಟ ಪಡುತ್ತಾನೆ.

ಇಲ್ಲಿ‌ ನಾಯಕನಾಗಿ  ನಟಿಸುತ್ತಿರುವವರು  ಭೀಮೇಶ್. ಅವರು ಏಳೆಂಟು ವರ್ಷಗಳಿಂದ ರಂಗಭೂಮಿ ಕಲಾವಿದರಾಗಿರುವವರು. ಚಿತ್ರದಲ್ಲಿ ಬೆಂಗಳೂರಿನ‌ ಉದ್ಯಮಿಯೋರ್ವರ ಪುತ್ರನ ಪಾತ್ರ ತಮ್ಮದು ಎಂದು ಅವರು ಹೇಳಿದರು. ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಸಿಂಧು ರಾವ್, "ನಾನು ಇದೇ ಚಿತ್ರದ ಮೂಲಕ ಬಣ್ಣ ಹಚ್ಚಿ ಅಭಿನಯ ಶುರು ಮಾಡಿದ್ದೆ. ಇದರ ಬಳಿಕ ಒಂದಷ್ಟು ಅವಕಾಶಗಳು ದೊರಕಿವೆ. ಚಿತ್ರದಲ್ಲಿ ನನ್ನ ಪಾತ್ರಕ್ಕೆ ಮೂರು ಶೇಡ್ ಗಳಿವೆ. ಆತ್ಮ ಮತ್ತು ದೇವಿ ನನ್ನ ದೇಹದಲ್ಲಿ ಪ್ರವೇಶಿಸುವ ಸನ್ನಿವೇಶಗಳು ಇರುವುದರಿಂದಾಗಿ ನಟನೆಗೆ ಹೆಚ್ಚು ಅವಕಾಶವಿದೆ" ಎಂದರು.‌

ಚಿತ್ರಕ್ಕೆ ವಿನು ಮನಸು ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ನೀಡಿರುವ ಜೇಮ್ಸ್  ಮಾತನಾಡಿ ಚಿತ್ರದ ಕೆಲಸ‌ ಸಂತೃಪ್ತಿ ತಂದಿದೆ ಎಂದರು. ನಿರ್ಮಾಪಕರ ಸಂಬಂಧಿ ಸುಧೀಂದ್ರ ಚಿತ್ರಕ್ಕೆ ಶುಭ ಕೋರಿದರು. ಸಹನಿರ್ಮಾಪಕ  ಎಚ್ ಬಿ ನಾಗಲಿಂಗಪ್ಪ "ನಾವು ರೈತ ಕುಟುಂಬದಿಂದ ಬಂದವರು" ಎಂದರು. ಕಲಾವಿದ ರೇವಣ್ಣ ಬಳ್ಳಾರಿಯವರು ತಮಗೆ ಈ‌ ಹಿಂದೆ ರಂಗಭೂಮಿ ಕಲಾವಿದನಾಗಿ ನಟಿಸಿದ ಅನುಭವವಿದೆ. ಚಿತ್ರದಲ್ಲಿ ಮಳೆ ತರಿಸುವ ಮಹರ್ಷಿಯ ಪಾತ್ರ ನಿರ್ವಹಿಸಿದ್ದೇನೆ ಎಂದರು.

ನೃತ್ಯ ನಿರ್ದೇಶಕ ರಾಮ್ ದೇವ್‌ ನಾಟ್ಯ ಸಂಯೋಜನೆಯ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಅಖಿಲ ಕರ್ನಾಟಕ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ  ರವಿಸಿಂಗ್ ಮಾತನಾಡಿ "ಚಿತ್ರೀಕರಣದ ವೇಳೆಯೇ ಸೆಟ್ ಗೆ ಹೋಗಿ ನೋಡಿದ್ದೇನೆ. ನಿರ್ದೇಶಕರು ತುಂಬ ತಾಳ್ಮೆ ಹೊಂದಿದವರು. ಅವರ ಮತ್ತು ತಂಡದ ಶ್ರಮಕ್ಕೆ ಚಿತ್ರ ಪ್ರತಿಫಲ‌ ನೀಡಲಿ" ಎಂದು ಶುಭ ಕೋರಿದರು. ಇದೇ ಸಂದರ್ಭದಲ್ಲಿ ನಿರ್ದೇಶಕರ ಮುಂದಿನ ಚಿತ್ರದ ಶೀರ್ಷಿಕೆ ಅನಾವರಣವೂ ನಡೆಯಿತು.

ಕೆ.ಟಿ.ಜಿ ನಗರ ಎಂಬ ಹೆಸರಿನ ಶೀರ್ಷಿಕೆಯನ್ನು 'ಕೋಟಿಗೊಂದು ಲವ್ ಸ್ಟೋರಿ'ಯ ಜಗ್ಗು ಸಿರ್ಸಿ ಅನಾವರಣಗೊಳಿಸಿದರು.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News