×
Ad

ಸುಪ್ರೀಂ ತೀರ್ಪು ಸರಕಾರದ ಪರವಾಗಿದ್ದರೆ ಪಾನ್-ಆಧಾರ್ ಜೋಡಣೆ ಕಾಲಾವಕಾಶ ಹೆಚ್ಚಳ

Update: 2017-12-03 18:36 IST

ಹೊಸದಿಲ್ಲಿ,ಡಿ.3: ಸರ್ವೋಚ್ಚ ನ್ಯಾಯಾಲಯವು ಸರಕಾರದ ಪರವಾಗಿ ತೀರ್ಪು ನೀಡಿದರೆ ಅದು ಪಾನ್-ಆಧಾರ್ ಜೋಡಣೆಗೆ ಮೂರರಿಂದ ಆರು ತಿಂಗಳುಗಳ ಕಾಲಾವಕಾಶವನ್ನು ನೀಡಲಿದೆ ಮತ್ತು ಈ ಗಡುವಿನ ಬಳಿಕ ಆಧಾರ್‌ನೊಂದಿಗೆ ಜೋಡಣೆಗೊಳ್ಳದ ಎಲ್ಲ ಪಾನ್ ಕಾರ್ಡ್‌ಗಳು ರದ್ದಾಗಲಿವೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಈ ರದ್ದತಿಯಿಂದ ಎಲ್ಲ ನಕಲಿ ಪಾನ್ ಕಾರ್ಡ್‌ಗಳು ಅಸ್ತಿತ್ವ ಕಳೆದುಕೊಳ್ಳಲಿವೆ ಮತ್ತು ಬೇನಾಮಿ ವಹಿವಾಟುಗಳು ಅಸಿಂಧುಗೊಳ್ಳಲಿವೆ ಎಂದೂ ಅವರು ಸ್ಪಷ್ಟಪಡಿಸಿದರು.

ಹಾಲಿ ಪಾನ್-ಆಧಾರ್ ಜೋಡಣೆಗೆ ಈ ವರ್ಷದ ಡಿ.31 ಕೊನೆಯ ದಿನಾಂಕವಾಗಿದೆ. ಇದನ್ನು 2018,ಮಾ.31ಕ್ಕೆ ವಿಸ್ತರಿಸಲು ತಾನು ಸಿದ್ಧವಿರುವುದಾಗಿ ಸರಕಾರವು ಕಳೆದ ತಿಂಗಳು ವಿಚಾರಣೆ ಸಂದರ್ಭ ಸರ್ವೋಚ್ಚ ನ್ಯಾಯಾಲಯಕ್ಕೆ ಸುಳಿವು ನೀಡಿತ್ತು.

ಪಾನ್-ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸುವ ಸರಕಾರದ ನಿಲುವನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದರೆ ಮತ್ತು ಪ್ರಸ್ತಾಪಿತ ಗಡುವನ್ನು ಒಪ್ಪಿಕೊಂಡರೆ ಎಲ್ಲ ತೆರಿಗೆದಾರರು ಜೋಡಣೆಯನ್ನು ಪೂರ್ಣಗೊಳಿಸಲು 3ರಿಂದ 6 ತಿಂಗಳುಗಳ ಹೆಚ್ಚಿನ ಗಡುವು ನೀಡಲಾಗುವುದು ಎಂದು ಅಧಿಕಾರಿ ತಿಳಿಸಿದರು.

ನವಂಬರ್‌ವರೆಗೆ 33 ಕೋಟಿ ಪಾನ್ ಕಾರ್ಡ್‌ಗಳ ಪೈಕಿ 13.28 ಕೋಟಿ ಕಾರ್ಡ್ ಗಳು ಆಧಾರ್‌ನೊಂದಿಗೆ ಜೋಡಣೆಗೊಂಡಿವೆ ಎಂದು ಅಧಿಕಾರಿ ತಿಳಿಸಿದರು.

ಆಧಾರ್‌ನ್ನು ಬ್ಯಾಂಕ್ ಖಾತೆಗಳು, ಮೊಬೈಲ್ ಫೋನ್ ಸಂಖ್ಯೆಗಳು ಇತ್ಯಾದಿ ಗಳೊಂದಿಗೆ ಕಡ್ಡಾಯವಾಗಿ ಜೋಡಣೆಗೊಳಿಸುವುದರ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News