ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಬಾರದೆಂದು ಪ್ರಧಾನಿಗೆ ಒಬಾಮ ಸಲಹೆ ನೀಡುವ ಸ್ಥಿತಿ ನಾಚಿಕೆಗೇಡು: ತರೂರ್

Update: 2017-12-04 06:21 GMT

ಹೊಸದಿಲ್ಲಿ, ಡಿ.4: ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಲು ಅವಕಾಶ ನೀಡಬಾರದು ಎಂದು ತಾನು ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಹಿಂದೊಮ್ಮೆ ಭೇಟಿಯ ವೇಳೆ ಹೇಳಿದ್ದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಹೇಳಿರುವುದನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಗಂಭೀರವಾಗಿ ಪರಿಗಣಿಸಿದ್ದಾರೆ

‘‘ಭಾರತೀಯ ನಾಯಕರೊಬ್ಬರಿಗೆ ವಿದೇಶಿ ನಾಯಕರೊಬ್ಬರು ಹೀಗೆ ಹೇಳಬೇಕಾಯಿತೆಂಬುದು ನಾಚಿಕೆಯ ವಿಚಾರ. ನಮ್ಮದು ಸಹಬಾಳ್ವೆಯ ಇತಿಹಾಸ ಹೊಂದಿದೆ ದೇಶವಾಗಿರುವಾಗ, ನಮ್ಮ ಸಂವಿಧಾನ ವೈವಿಧ್ಯತೆಯನ್ನು ಎತ್ತಿ ಹಿಡಿದಿರುವಾಗ ಕೆಲವು ಭಾರತೀಯರು ದೇಶದ ಆಧಾರ ಸ್ಥಂಭಗಳಾಗಿರುವಂತಹ ಮೌಲ್ಯಗಳನ್ನು ಪ್ರತಿಪಾದಿಸುತ್ತಿಲ್ಲವೆಂಬುದು ಖೇದಕರ’’ ಎಂದು ತರೂರ್ ಹೇಳಿದ್ದಾರೆ.

ಹಿಂದುಸ್ತಾನ್ ಟೈಮ್ಸ್ ಲೀಡರ್ ಶಿಪ್ ಶೃಂಗಸಭೆಯಲ್ಲಿ ಕಳೆದ ಶುಕ್ರವಾರ ಭಾಗವಹಿಸಿದ್ದ ಒಬಾಮ ತಮ್ಮ ಭಾಷಣದಲ್ಲಿ ಭಾರತವು ತನ್ನ ಮುಸ್ಲಿಂ ಜನಸಂಖ್ಯೆಯನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂದು ಹೇಳಿದ್ದರು. ‘‘ದೇಶವು ಧರ್ಮದ ಆಧಾರದಲ್ಲಿ ಒಡೆಯಬಾರದು. ಇದನ್ನು ಅಮೆರಿಕದಲ್ಲಿ ಪ್ರಧಾನಿ ಮೋದಿಯ ಜತೆ ಮಾತನಾಡುವಾಗಲೂ ಸ್ಪಷ್ಟ ಪಡಿಸಿದ್ದೆ’’ ಎಂದಿದ್ದರು.

2015ರ ತಮ್ಮ ಭಾರತ ಭೇಟಿಯ ವೇಳೆಯೂ ಅಸಹಿಷ್ಣುತೆಯ ಘಟನೆಗಳ ಬಗ್ಗೆ ಪ್ರತಿಕ್ರಿಯಿಸಿ ‘‘ಇಂತಹ ಕೃತ್ಯಗಳು ದೇಶದ ಸ್ವಾತಂತ್ರ್ಯದ ಕಾರಣೀಭೂತರಾದ ಗಾಂಧೀಜಿಯವರಿಗೂ ಆಘಾತ ತರುತ್ತಿದ್ದವು’’ ಎಂದು ಒಬಾಮ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News