ಉತ್ತರ ಪ್ರದೇಶ ಚುನಾವಣೆ: ಗರಿಷ್ಠ ಸ್ಥಾನಗಳನ್ನು ಗಳಿಸಿದ್ದು ಬಿಜೆಪಿಯಲ್ಲ!
ಲಕ್ನೋ, ಡಿ.4: ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಸ್ಥಳೀಯಾಡಳಿತ ಚುನಾವಣೆಯಲ್ಲಿ ಬಿಜೆಪಿ ತಾನು ದಾಖಲಿಸಿದ ವಿಜಯದ ಸಂಭ್ರಮಾಚರಣೆಯ ಗುಂಗಿನಲ್ಲೇ ಇನ್ನೂ ಇದೆ. ಆದರೆ ಈ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗೆದ್ದಿದ್ದು ಬಿಜೆಪಿಯಲ್ಲ. ಬಿಜೆಪಿ 16 ಮೇಯರ್ ಸ್ಥಾನಗಳ ಪೈಕಿ 14 ಸ್ಥಾನಗಳನ್ನು ತನ್ನದಾಗಿಸಿದ್ದು ನಿಜ. ಆದರೆ ಅಂಕಿಸಂಖ್ಯೆಗಳ ಪ್ರಕಾರ ಗರಿಷ್ಠ ಸ್ಥಾನಗಳನ್ನು ಗಳಿಸಿದವರು ಪಕ್ಷೇತರ ಅಭ್ಯರ್ಥಿಗಳು.
ನಗರ ಪಂಚಾಯತ್ ಸದಸ್ಯರ ಅಂಕಿಸಂಖ್ಯೆ
ರಾಜ್ಯದಲ್ಲಿ ಒಟ್ಟು 5,433 ನಗರ ಪಂಚಾಯತ್ ಸದಸ್ಯ ಸ್ಥಾನಗಳಿದ್ದರೆ ಇವುಗಳಲ್ಲಿ 3,875 ಸ್ಥಾನಗಳನ್ನು ಅಂದರೆ ಶೇ.71.31 ಸ್ಥಾನಗಳನ್ನು ಪಕ್ಷೇತರರು ಪಡೆದಿದ್ದಾರೆ. ಅತ್ತ ಬಿಜೆಪಿ ಕೇವಲ 664 ಸ್ಥಾನಗಳು ಅಥವಾ ಶೇ.12.22 ಸ್ಥಾನಗಳನ್ನು ಮಾತ್ರ ಗಳಿಸಿದೆ. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ 453 ಸ್ಥಾನಗಳು (ಶೇ.8.34) ಪಡೆದಿದ್ದರೆ, ಬಿಎಸ್ಪಿ 218 ಸ್ಥಾನಗಳು (ಶೇ 4.01) ಹಾಗೂ ಕಾಂಗ್ರೆಸ್ 126 ಸ್ಥಾನಗಳಲ್ಲಿ ವಿಜಯಿಯಾಗಿವೆ.
ನಗರ ಪಂಚಾಯತ್ ಅಧ್ಯಕ್ಷರುಗಳು
ನಗರ ಪಂಚಾಯತುಗಳಲ್ಲಿ ಒಟ್ಟು 438 ಅಧ್ಯಕ್ಷರ ಸ್ಥಾನಗಳಿದ್ದು, ಇವುಗಳಲ್ಲಿ 182 ಸ್ಥಾನಗಳನ್ನು (ಶೇ 41.55) ಪಕ್ಷೇತರರು ಪಡೆದಿದ್ದರೆ, ಬಿಜೆಪಿ 100 ಸ್ಥಾನಗಳನ್ನು (ಶೇ 22.83) ಪಡೆದಿದೆ.
ನಗರ ಪಾಲಿಕಾ ಪರಿಷದ್:
ನಗರ ಪಾಲಿಕಾ ಪರಿಷದ್ ಚುನಾವಣೆಯಲ್ಲೂ ಪಕ್ಷೇತರರೇ ಮೇಲುಗೈ ಸಾಧಿಸಿದ್ದಾರೆ. 198 ನಗರ ಪಾಲಿಕಾ ಪರಿಷದ್ ಗಳ 5,260 ವಾರ್ಡುಗಳ ಪೈಕಿ ಪಕ್ಷೇತರರು 3,380 ವಾರ್ಡುಗಳಲ್ಲಿ (ಶೇ.64.25) ಜಯ ಸಾಧಿಸಿದ್ದರೆ, ಬಿಜೆಪಿ ಜಯ ಗಳಿಸಿದ್ದು 922 (ಶೇ.17.53) ವಾರ್ಡುಗಳಲ್ಲಿ ಮಾತ್ರ.
198 ನಗರ ಪಾಲಿಕಾ ಪರಿಷದ್ ಅಧ್ಯಕ್ಷರುಗಳ ಹುದ್ದೆಯಲ್ಲಿ ಬಿಜೆಪಿ 70 ಹುದ್ದೆಗಳನ್ನು ಪಡೆದಿದ್ದರೆ ಸಮಾಜವಾದಿ ಪಕ್ಷ 45 ಹುದ್ದೆಗಳನ್ನು ಹಾಗೂ ಪಕ್ಷೇತರರು 43 ಹುದ್ದೆಗಳನ್ನು ಪಡೆದಿದ್ದಾರೆ.
ಮುನಿಸಿಪಲ್ ಕಾರ್ಪೊರೇಟರ್ ಸ್ಥಾನಗಳು
ಒಟ್ಟು 1,299 ಮುನಿಸಿಪಲ್ ಕಾರ್ಪೊರೇಟರ್ ಸ್ಥಾನಗಳಿಗೆ ಚುನಾವಣೆ ನಡೆದಿದ್ದರೆ ಅವುಗಳಲ್ಲಿ ಬಿಜೆಪಿ 596 ಸ್ಥಾನಗಳಲ್ಲಿ ಜಯ ಗಳಿಸಿದ್ದು, ಪಕ್ಷೇತರರು 224ರಲ್ಲಿ ಜಯ ಸಾಧಿಸಿದ್ದಾರೆ. ಇಲ್ಲಿ ಕೂಡ ಪಕ್ಷೇತರರು ಎಸ್ಪಿ, ಬಿಎಸ್ಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗಿಂತ ಹೆಚ್ಚು ಸ್ಥಾನ ಪಡೆದಿದ್ದಾರೆ.
ಸ್ಥಳೀಯಾಡಳಿತ ಚುನಾವಣೆಗೆ ಬಳಸಲಾದ ವಿದ್ಯುನ್ಮಾನ ಮತ ಯಂತ್ರಗಳನ್ನು ತಿರುಚಲಾಗಿರುವುದರಿಂದ ಬಿಜೆಪಿ ಗೆದ್ದಿದೆ ಎಂದು ಕಾಂಗ್ರೆಸ್ ಈಗಾಗಲೇ ಆರೋಪಿಸಿದೆ. ರಾಜ್ಯದ 16 ಮೇಯರ್ ಚುನಾವಣೆಗಳ ಪೈಕಿ 14ರಲ್ಲಿ ಬಿಜೆಪಿ ಗೆದ್ದಿದ್ದರೆ, ಈ ಚುನಾವಣೆಗೆ ಇವಿಎಂ ಬಳಸಲಾಗಿತ್ತು ಎಂಬುದು ಉಲ್ಲೇಖಾರ್ಹ. ಅತ್ತ ನಗರ ಪಾಲಿಕಾ ಪರಿಷದ್ ಹಾಗೂ ನಗರ ಪಂಚಾಯತ್ ಚುನಾವಣೆಗಳಿಗೆ ಬ್ಯಾಲೆಟ್ ಪೇಪರ್ ಬಳಸಲಾಗಿತ್ತು. ಮಾಯಾವತಿಯ ಬಿಎಸ್ಪಿ ಮೀರತ್ ಹಾಗೂ ಆಲಿಘರ್ ನಲ್ಲಿ ಮೇಯರ್ ಸ್ಥಾನ ಪಡೆದಿದೆ.