ರಾಜಸ್ಥಾನ ಸರಕಾರದ ವಿವಾದಾತ್ಮಕ ಅಧ್ಯಾದೇಶಕ್ಕೆ ಇಂದು ಕೊನೆಯ ದಿನ

Update: 2017-12-04 09:25 GMT
ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ

ಜೈಪುರ್,ಡಿ.4 :  ರಾಜ್ಯ ಸರಕಾರದ ಅನುಮತಿಯಿಲ್ಲದೆ ಸರಕಾರಿ ಅಧಿಕಾರಿಗಳು ಹಾಗೂ  ನ್ಯಾಯಾಧೀಶರುಗಳ ವಿರುದ್ಧ ತನಿಖೆ ನಡೆಸುವುದನ್ನು ನಿರ್ಬಂಧಿಸಿದ್ದ ರಾಜಸ್ಥಾನ ಸರಕಾರದ ವಿವಾದಾತ್ಮಕ ಅಧ್ಯಾಧೇಶ ಇಂದು ರಾತ್ರಿಯಿಂದ ಊರ್ಜಿತದಲ್ಲಿರುವುದಿಲ್ಲ.

ಈ ವರ್ಷದ ಸೆ.7ರಂದು ಜಾರಿಗೆ ಬಂದ ಕ್ರಿಮಿನಲ್ ಕಾನೂನು (ರಾಜಸ್ಥಾನ ತಿದ್ದುಪಡಿ) ಅಧ್ಯಾದೇಶವನ್ನು ಕಳೆದ 89 ದಿನಗಳ ಅವಧಿಯಲ್ಲಿ ಒಂದೇ ಒಂದು ಬಾರಿ ಉಪಯೋಗಿಸಲಾಗಿಲ್ಲ ಎಂದು ರಾಜ್ಯದ ಸಂಸದೀಯ ವ್ಯವಹಾರಗಳ ಸಚಿವ ರಾಜೇಂದ್ರ ರಾಥೋರ್ ಹೇಳಿದ್ದಾರೆ.

"ಈ ಮಸೂದೆಯನ್ನು ಸದನ ಸಮಿತಿಯೊಂದರ ಮುಂದೆ ಇರಿಸಲಾಗಿದೆಯೆಂದರೆ ಅದರಲ್ಲಿ ತಿದ್ದುಪಡಿ ತರಲಾಗುವುದೆಂಬ ಅರ್ಥ. ಸದನ ಸಮಿತಿಯ ಶಿಫಾಋಸಿನಂತೆ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಸರಕಾರದ ಈ ವಿವಾದಾತ್ಮಕ ಅಧ್ಯಾದೇಶದಂತೆ ಕ್ರಿಮಿನಲ್ ದಂಡ ಸಂಹಿತೆಯ ಸೆಕ್ಷನ್ 156(3) ಅನ್ವಯ  ಮಾಜಿ ಹಾಗೂ ಹಾಲಿ ಸರಕಾರಿ ಅಧಿಕಾರಿಗಳು ಹಾಗೂ ನ್ಯಾಯಾಧೀಶರುಗಳ ವಿರುದ್ಧ  ಭ್ರಷ್ಟಾಚಾರ ಆರೋಪಗಳ ತನಿಖೆ ನಡೆಸುವ ಮೊದಲು ಸರಕಾರದ ಅನುಮತಿ ಪಡೆಯಬೇಕಿತ್ತು. ಸರಕಾರದ ಅನುಮತಿ ಪಡೆಯುವ ಮುಂಚಿತವಾಗಿಯೇ ಕಾನೂನು ಕ್ರಮ ಕೈಗೊಂಡವರಿಗೆ ಎರು ವರ್ಷಗಳ ಜೈಲು ಶಿಕ್ಷೆ ನೀಡಲಾಗುವುದೆಂದೂ ಈ ಅಧ್ಯಾದೇಶದಲ್ಲಿ ತಿಳಿಸಲಾಗಿತ್ತು. ಕ್ರಿಮಿನಲ್ ದಂಡ ಸಂಹಿತೆಯ ದುರುಪಯೋಗ ತಡೆಯಲು ಹೀಗೆ ಮಾಡಲಾಗಿದೆ ಎಂದು ಸರಕಾರ ತನ್ನನ್ನು ಸಮರ್ಥಿಸಿಕೊಂಡಿತ್ತು.

ಇದೀಗ  ಈ  ಬಗ್ಗೆ ಸದನ ಸಮಿತಿ ಮುಂದಿನ  ಬಜೆಟ್ ಅಧಿವೇಶನಕ್ಕಿಂತ ಮೊದಲು ತನ್ನ ವರದಿ ಸಲ್ಲಿಸುವ ನಿರೀಕ್ಷೆಯಿದೆ. ಸಮಿತಿ ಡಿ.27ರಂದು ಸಭೆ ಸೇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News