×
Ad

ಮೋದಿ ರ‍್ಯಾಲಿಗಳಲ್ಲಿ ಖಾಲಿ ಕುರ್ಚಿಗಳು : ಸಾಮಾಜಿಕ ತಾಣದಲ್ಲಿ ವೀಡಿಯೊ ವೈರಲ್

Update: 2017-12-04 16:03 IST

ಅಹ್ಮದಾಬಾದ್,ಡಿ.4 :  ಮುಂಬರುವ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಗುಜರಾತ್ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ಅಬ್ಬರದಿಂದಲೇ ನಡೆಯುತ್ತಿದೆ. ಇದರ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಟಿದಾರ್ ಅನಾಮತ್ ಆಂದೋಲನ್ ಸಮಿತಿ ನಾಯಕ ಹಾರ್ದಿಕ್ ಪಟೇಲ್ ನಡುವೆ ಒಂದು ಕುತೂಹಲಕಾರಿ ಸ್ಪರ್ಧೆ ನಡೆಯುತ್ತಿದೆ. ಅದು ಅವರ ರ‍್ಯಾಲಿಗಳಲ್ಲಿ ಸೇರುತ್ತಿರುವ ಜನಸಂದಣಿಯ ಬಗ್ಗೆ. ಈ ನಿಟ್ಟಿನಲ್ಲಿ ಪಾಟಿದಾರ್ ನಾಯಕ್ ಹಾರ್ದಿಕ್ ಅವರು ಪ್ರಧಾನಿಯೆದುರು ಮೇಲುಗೈ ಸಾಧಿಸಿದ್ದಾರೆಂಬುದು ಸ್ಪಷ್ಟ.

ಬುಧವಾರ ಹಾರ್ದಿಕ್ ರಾಜಕೋಟ್ ನಲ್ಲಿ ಭಾಗವಹಿಸಿದ್ದ ರ್ಯಾಲಿಯಲ್ಲಿ ಅಂದಾಜು ಒಂದು ಲಕ್ಷ ಜನರು ಭಾಗವಹಿಸಿದ್ದಾರೆ. ಅವರ ದೊಡ್ಡ ಯಶಸ್ಸೆಂದರೆ ಅವರು ರ‍್ಯಾಲಿಗಳಲ್ಲಿ ಸೇರುವ ಜನಸಂದಣಿಯ ವಿಚಾರದಲ್ಲಿ ಬಿಜೆಪಿಯನ್ನು ಸ್ಪರ್ಧೆಗೆ ಆಹ್ವಾನಿಸುವಲ್ಲಿ ಸಫಲರಾಗಿದ್ದಾರೆ.
ಇದನ್ನು ಪ್ರತಿಷ್ಠೆಯ ವಿಚಾರವನ್ನಾಗಿಸಿರುವ ಬಿಜೆಪಿ ಹಾರ್ದಿಕ್ ಪಟೇಲ್ ರ್ಯಾಲಿಗಳಿಗೆ ಸೇರುವ ಜನರ ಸಂಖ್ಯೆಯನ್ನು ತನ್ನ ರ‍್ಯಾಲಿಗಳು ಸರಿಗಟ್ಟುವಂತೆ ಮಾಡಲು ಹೆಣಗಾಡುತ್ತಿದೆ.

ಮೋದಿ ತನ್ನ ಎರಡನೇ ಹಂತದ ಪ್ರಚಾರಾರ್ಥ ಜಂಬೂಸರ್ ಹಾಗೂ ಭರೂಚ್ ನಲ್ಲಿ ಭಾಗವಹಿಸಿದ್ದ ರ‍್ಯಾಲಿಗಳಲ್ಲಿ ಕೂಡ ಸಾಕಷ್ಟು ಸಂಖ್ಯೆಯ ಜನರು  ಹಾಜರಿರಲಿಲ್ಲ. ಹಲವಾರು ಖಾಲಿ ಕುರ್ಚಿಗಳಿದ್ದವಲ್ಲದೆ ಮೋದಿ ಮಾತನಾಡುತ್ತಿರುವಂತೆಯೇ ಜನರು ಎದ್ದು ಹೋಗುತ್ತಿರುವುದು ಕಾಣುತ್ತಿತ್ತು. ಜಸ್ದನ್ ಎಂಬಲ್ಲಿನ ರ‍್ಯಾಲಿಗಾಗಿ ಇರಿಸಲಾಗಿದ್ದ ಬಹುತೇಕ ಕುರ್ಚಿಗಳು ಖಾಲಿಯಿದ್ದವು, ಈ ಖಾಲಿ ಕುರ್ಚಿಗಳ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಧಾರಿ ಎಂಬಲ್ಲಿನ ರ‍್ಯಾಲಿಯಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಕಮ್ರೇಜ್ ಎಂಬಲ್ಲಿ ನಡೆಯಬೇಕಿದ್ದ ರ‍್ಯಾಲಿಯ ಸಂದರ್ಭ ಪಾಟಿದಾರ್  ಕಾರ್ಯಕರ್ತರು ತೊಂದರೆಯುಂಟು ಮಾಡಬಹುದೆನ್ನುವ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಅಲ್ಲಿಂದ 15 ಕಿಮೀ ದೂರದ ಕಡೋದರ ಎಂಬಲ್ಲಿ ಆಯೋಜಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News