ಮಗನಿಗೆ ಮಾದರಿ ಮದುವೆ ಮಾಡಿ ತೋರಿಸಿದರು ಬಿಹಾರ ಡಿಸಿಎಂ ಮೋದಿ

Update: 2017-12-04 11:13 GMT

# ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದ ಮದುವೆ 

ಪಾಟ್ನಾ, ಡಿ.4: ಬಿಹಾರ ಡಿಸಿಎಂ ಸುಶೀಲ್ ಕುಮಾರ್ ಮೋದಿ ಪುತ್ರ ಉತ್ಕರ್ಷ್  ಅವರ ವಿವಾಹವು ರವಿವಾರ ರಾಜಕೀಯ ನಾಯಕರ ಹಾಗು ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. ಸಮಾರಂಭದಲ್ಲಿ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಭಾಗವಹಿಸಿದ್ದು ವಿಶೇಷವಾಗಿತ್ತು.

ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್, ರಾಮ್ ವಿಲಾಸ್ ಪಾಸ್ವಾನ್, ಧರ್ಮೇಂದ್ರ ಪ್ರಧಾನ್, ಗಿರಿರಾಜ್ ಸಿಂಗ್, ಬಿಹಾರ ರಾಜ್ಯಪಾಲ ಸತ್ಯಪಾಲ್ ಮಲಿಕ್, ಗೋವಾ ರಾಜ್ಯಪಾಲ ಮೃದುಲಾ ಸಿಂಹ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮೊದಲಾದವರು ಭಾಗವಹಿಸಿದ್ದರು.

ಮ್ಯೂಸಿಕ್ ಬ್ಯಾಂಡ್ ಗಳಿಲ್ಲದೆ, ಹೆಚ್ಚಿನ ಆಡಂಬರವಿಲ್ಲದೆ ನಡೆದ ಮದುವೆ ಎಲ್ಲರ ಗಮನಸೆಳೆಯಿತು. ಯಾವುದೇ ಉಡುಗೊರೆಯನ್ನು ತರದಂತೆ ಅತಿಥಿಗಳಿಗೆ ಮೊದಲೇ ತಿಳಿಸಲಾಗಿತ್ತು. ಮದುವೆಗೆ ಆಗಮಿಸಿದವರಿಗೆ ನಾಲ್ಕು ಲಡ್ಡುಗಳಿದ್ದ ಪ್ಯಾಕೆಟನ್ನು ನೀಡಲಾಯಿತು.

ಸಾಮಾನ್ಯ ಬಿಳಿ ಖಾದಿ ಕುರ್ತಾ, ಪೈಜಾಮವನ್ನು ಮದುಮಗ ಉತ್ಕರ್ಷ್ ಧರಿಸಿದ್ದರು. ವೆಟರ್ನರಿ ಕಾಲೇಜಿನ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ವರದಕ್ಷಿಣೆ ಹಾಗು ಬಾಲ್ಯವಿವಾಹದ ಬಗ್ಗೆ ಜಾಗೃತಿ ಮೂಡಿಸುವ ಬ್ಯಾನರ್ ಹೋರ್ಡಿಂಗ್ ಗಳು ಗಮನ ಸೆಳೆದವು. ವರದಕ್ಷಿಣೆ ಹಾಗು ಬಾಲ್ಯವಿವಾಹದ ವಿರುದ್ಧ ಜಾಗೃತಿ ಮೂಡಿಸಲು ವಿವಾಹ ಸಮಾರಂಭಕ್ಕೆ ಆಗಮಿಸುವವರಿಗೆ ಫಾರ್ಮ್ ಗಳನ್ನು ಹಾಗು ಕಣ್ಣು ಹಾಗು ಇತರ ಅಂಗಾಂಗಳನ್ನು ದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಪ್ಯಾಂಪ್ಲೆಟ್ ಗಳನ್ನು ವಿತರಿಸಲಾಯಿತು.

ಸಾಮಾನ್ಯವಾಗಿ ಆಡಂಬರ, ಅದ್ಧೂರಿತನದಿಂದ ನಡೆಯುವ ರಾಜಕಾರಣಿಗಳ ಮನೆಯ ಮದುವೆಯನ್ನು ಗಮನಿಸುವುದಾದರೆ ಸುಶೀಲ್ ಕುಮಾರ್ ಮೋದಿ ಪುತ್ರನ ಮದುವೆ ವಿಭಿನ್ನವಾಗಿದೆ. ಕೇವಲ ಸಮಾರಂಭ ಮಾತ್ರವಲ್ಲದೆ ಸಮಾಜಕ್ಕೆ ಸಂದೇಶ ಸಾರುವಲ್ಲೂ ಈ ವಿವಾಹ ಕಾರ್ಯಕ್ರಮ ಇತರರಿಗೆ ಮಾದರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News