ಬ್ರಹ್ಮಪುತ್ರ ನದಿಯ ನೀರು ಕಪ್ಪಾಗಲು ಕಾರಣ ಇಲ್ಲಿದೆ….

Update: 2017-12-04 14:54 GMT

ಹೊಸದಿಲ್ಲಿ, ಡಿ.4: ದಕ್ಷಿಣ ಟಿಬೆಟ್‌ನಲ್ಲಿ ಉದ್ಭವಿಸಿ ಅರುಣಾಚಲಪ್ರದೇಶದ ಮೂಲಕ ಅಸ್ಸಾಂ ತಲುಪಿದಾಗ ಬ್ರಹ್ಮಪುತ್ರ ಎಂದು ಕರೆಯಲ್ಪಡುವ ಸಿಯಾಂಗ್ ನದಿಯ ನೀರು ಕಪ್ಪಾಗಲು ಇತ್ತೀಚೆಗೆ ಆ ಪ್ರದೇಶದಲ್ಲಿ ಸಂಭವಿಸಿದ ಭೂಕಂಪವೇ ಕಾರಣ ಎಂದು ಪ್ರಾಥಮಿಕ ಅಧ್ಯಯನದಿಂದ ತಿಳಿದುಬಂದಿರುವುದಾಗಿ ಕೇಂದ್ರ ಸಚಿವ ಅರ್ಜುನ್ ರಾಮ್ ಮೆಘವಲ್ ತಿಳಿಸಿದ್ದಾರೆ.

ನದಿಯ ನೀರು ಮಲಿನಗೊಂಡಿರುವ ಮತ್ತು ಕಪ್ಪಾಗಿರುವ ಬಗ್ಗೆ ನಮಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗವು ಈ ಬಗ್ಗೆ ಅಧ್ಯಯನ ನಡೆಸುತ್ತಿದೆ ಮತ್ತು ನದಿ ಪ್ರದೇಶಕ್ಕೆ ತಜ್ಞರ ತಂಡವನ್ನು ಕಳುಹಿಸಲಾಗಿದೆ ಎಂದು ಜಲಸಂಪನ್ಮೂಲ ರಾಜ್ಯ ಸಚಿವರು ತಿಳಿಸಿದ್ದಾರೆ.

ನವೆಂಬರ್ 17ರಂದು ಟಿಬೆಟ್‌ನಲ್ಲಿ ಸಂಭವಿಸಿದ ಭೂಕಂಪದ ಪರಿಣಾಮವಾಗಿ ನದಿಯ ಹರಿವಿನ ಹಾದಿಯಲ್ಲಿ ಬದಲಾವಣೆ ಉಂಟಾಗಿದೆ ಎಂದು ಹೇಳಿದ ಅವರು ನದಿಯ ನೀರು ಕಪ್ಪಾಗಿರುವುದರ ಹಿಂದೆ ನೈಸರ್ಗಿಕ ಕಾರಣವಿರಬಹುದು ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಕಾಂಗ್ರೆಸ್ ಸಂಸದ ನಿನೊಂಗ್ ಎರಿಂಗ್, ಚಳಿಗಾಲದ ಸಮಯದಲ್ಲಿ ನದಿಯ ನೀರಿನ ಬಣ್ಣ ಬದಲಾಗುವುದು ಅಸ್ವಾಭಾವಿಕ ವಿದ್ಯಾಮಾನವಾಗಿದೆ ಎಂದು ತಿಳಿಸಿದ್ದರು. ಚೀನಾವು ಕ್ಸಿನ್‌ಜಿಯಾಂಗ್ ಪ್ರಾಂತ್ಯದ ಮೂಲಕ ತಕ್ಲಮಕನ್ ಮರುಭೂಮಿಗೆ ನೀರು ಪೂರೈಸಲು ಸಿಯಾಂಗ್ ನದಿಯನ್ನು ತಿರುಗಿಸಲು ಯುನಾನ್ ಪ್ರಾಂತ್ಯದಲ್ಲಿ 600 ಕಿ.ಮೀ ಉದ್ದ ಕಾಲುವೆಯನ್ನು ನಿರ್ಮಿಸುತ್ತಿರುವ ವರದಿಗಳು ಬಂದಿರುವುದಾಗಿ ಸಂಸದರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.

ಈ ವರದಿಯನ್ನು ಚೀನಾ ನಿರಾಕರಿಸಿದ್ದರೂ ಭಾರತಕ್ಕೆ ಮಾತ್ರ ಇದೊಂದು ಚಿಂತೆಯ ವಿಷಯವಾಗಿದೆ ಎಂದು ಪೂರ್ವ ಅರುಣಾಚಲಪ್ರದೇಶದ ಕಾಂಗ್ರೆಸ್ ಸಂಸದ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News