ಮಹಾರಾಷ್ಟ್ರ ಸರಕಾರದ ವಿರುದ್ಧ ಪ್ರತಿಭಟನೆ: ಯಶವಂತ ಸಿನ್ಹಾ ಬಂಧನ

Update: 2017-12-05 06:10 GMT

ಮುಂಬೈ, ಡಿ.5: ಮಹಾರಾಷ್ಟ್ರದ ಅಕೋಲ ಎಂಬಲ್ಲಿ ಸೋಮವಾರ ಸಂಜೆ ರೈತರ ಪ್ರತಿಭಟನೆಯೊಂದರ ನೇತೃತ್ವ ವಹಿಸಿದ್ದ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ವಿದರ್ಭ ಪ್ರಾಂತ್ಯದ ಸೋಯಾಬೀನ್ ಮತ್ತು ಹತ್ತಿ ಬೆಳೆಗಾರರ ಸಮಸ್ಯೆಗೆ ಸರಕಾರ ತೋರಿಸುತ್ತಿರುವ ನಿಷ್ಕಾಳಜಿಯ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾಧಿಕಾರಿ ಕಚೇರಿಯೆದುರು ಸಿನ್ಹಾ ಜತೆಗೆ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 250 ರೈತರನ್ನೂ ಬಾಂಬೆ ಪೊಲೀಸ್ ಕಾಯಿದೆಯ ಸೆಕ್ಷನ್ 68 ಅನ್ವಯ ವಶಪಡಿಸಿಕೊಳ್ಳಲಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕಲಾಸಾಗರ್ ತಿಳಿಸಿದ್ದಾರೆ.

ಸಿನ್ಹಾ ಅವರು ಬಂಧನದಿಂದ ಬಿಡುಗಡೆಗೊಂಡು ಹೋಗಬೇಕೆಂದಿದ್ದರೆ ಅವರು ಹೋಗಲು ಸ್ವತಂತ್ರರು ಎಂದು ಜಿಲ್ಲಾಧಿಕಾರಿ ಅಶಿತ್ ಕುಮಾರ್ ಪಾಂಡೆ ಹೇಳಿದರೂ ಸಿನ್ಹಾ ಮಾತ್ರ ಬಿಟಿ ಹತ್ತಿ ಕಂಪೆನಿಯ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದರು. ಇಂತಹ ಆರು ಕಂಪೆನಿಗಳ ವಿರುದ್ಧ ಸರಕಾರ ಈಗಾಗಲೇ ಕಠಿಣ ಕ್ರಮ ಕೈಗೊಂಡು ಅವುಗಳ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಂದೂ ಅವರು ತಿಳಿಸಿದ್ದಾರೆ.

‘‘ನಮ್ಮನ್ನು ಪೊಲೀಸರು ಬಿಡುಗಡೆಗೊಳಿಸಿದರೂ ನಾವು ಹೊರಟು ಹೋಗುವುದಿಲ್ಲ. ನಮ್ಮನ್ನು ಬಂಧಿಸಿ ಬಿಡುಗಡೆಗೊಳಿಸಿದರೆ ನಾವು ಮನೆಗೆ ಹಿಂದಿರುಗುತ್ತೇವೆ ಎಂದು ಅವರು ತಿಳಿಯುವ ಅಗತ್ಯವಿಲ್ಲ’’ ಎಂದಿದ್ದಾರೆ.

ಸಿನ್ಹಾ ಅವರು ರವಿವಾರದಿಂದ ರೈತರ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದು, ಕಾಪುಸ್ ಸೋಯಾಬೀನ್ ಧನ್ ಪರಿಷದ್ ಎಂಬ ಹೆಸರಿನ ಪ್ರತಿಭಟನೆಯನ್ನು ಶೇಟ್ಕಾರಿ ಜಾಗರ್ ಮಂಚ್ ಆಯೋಜಿಸಿತ್ತು. ಕನಿಷ್ಠ ಬೆಂಬಲ ಬೆಲೆಗಿಂತ ಶೇ.50ರಷ್ಟು ಹೆಚ್ಚಿನ ಬೆಲೆಯನ್ನು ರೈತರಿಗೆ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ನಂತರ ಅದನ್ನು ಮರೆತಿದೆ ಎಂದು ಸಿನ್ಹಾ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News