ಸೈಬರ್ ಅಪರಾಧ: ಅಪಾಯಕಾರಿ ಮಟ್ಟಕ್ಕೆ ತಲುಪಿದೆ ಈ ರಾಜ್ಯ..

Update: 2017-12-05 14:12 GMT

ಮುಂಬೈ, ಡಿ.5: ಮಹಾರಾಷ್ಟ್ರ ಪೊಲೀಸ್ ಇಲಾಖೆ ಒದಗಿಸಿರುವ ಅಂಕಿಅಂಶಗಳ ಪ್ರಕಾರ ಸೈಬರ್ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಮತ್ತು ಅಪರಾಧಿಗಳಿಗೆ ಶಿಕ್ಷೆ ಒದಗಿಸುವಲ್ಲಿ ರಾಜ್ಯ ಪೊಲೀಸ್ ಇಲಾಖೆಯು ಅತ್ಯಂತ ಕಳಪೆ ಸಾಧನೆ ತೋರಿದೆ.

2012ರಿಂದ ನೀಡಲಾಗಿರುವ ಅಂಕಿಅಂಶಗಳ ಪ್ರಕಾರ ಶೇಕಡಾ 80 ಸೈಬರ್ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಇಷ್ಟು ಕಡಿಮೆ ಶಿಕ್ಷೆಯ ಪ್ರಮಾಣವು ಪೊಲೀಸ್ ಇಲಾಖೆ ಸೈಬರ್ ಅಪರಾಧ ಪ್ರಕರಣಗಳ ತನಿಖೆ ನಡೆಸಲು ಮತ್ತು ಸಾಕ್ಷಿ ಕಲೆಹಾಕುವಲ್ಲಿ ಉಪಯೋಗಿಸುವ ತಂತ್ರಗಳ ಬಗ್ಗೆ ಅನುಮಾನಗಳನ್ನು ಮೂಡಿಸುತ್ತದೆ.

2012ರಿಂದ ಜೂನ್ 2017ರವರೆಗೆ 184 ಸೈಬರ್ ಅಪರಾಧ ಪ್ರಕರಣಗಳ ವಿಚಾರಣೆಯನ್ನು ಪೂರ್ಣಗೊಳಿಸಲಾಗಿದ್ದು ಈ ಪೈಕಿ 34 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದ್ದರೆ ಉಳಿದ 150 ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಅಂಕಿಅಂಶ ತಿಳಿಸುತ್ತದೆ. ಕಳೆದ ಐದೂವರೆ ವರ್ಷಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳ ಪತ್ತೆಹಚ್ಚುವಿಕೆ ದರವು ಕೇವಲ 31% ಆಗಿದೆ. 2012ರಿಂದ ಜೂನ್ 2017ರವರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಜೊತೆಗೆ ಭಾರತೀಯ ದಂಡಸಂಹಿತೆ ಮತ್ತು ವಿಶೇಷ ನ್ಯಾಯ ಪ್ರಕರಣಗಳ ಅಡಿಯಲ್ಲಿ 10,419 ಸೈಬರ್ ಅಪರಾಧ ಪ್ರಕರಣಗಳನ್ನು ದಾಖಲಿಸಲಾಗಿದ್ದು ಕೇವಲ 3167ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.

2012ರಲ್ಲಿ 900ರಷ್ಟಿದ್ದ ಸೈಬರ್ ಅಪರಾಧ ಪ್ರಕರಣ ದಾಖಲು ದರವು 2016ರ ವೇಳೆಗೆ 2417 ತಲುಪಿದ್ದು ಇದೇ ವೇಳೆ ಪತ್ತೆಹಚ್ಚುವಿಕೆ ದರವು 2012ರ 33.3ರಿಂದ 2016ರ ವೇಳೆಗೆ 23.07ಗೆ ತಲುಪಿದೆ.

ಸರಿಯಾದ ತರಬೇತಿಯ ಕೊರತೆ ಮತ್ತು ಕಳಪೆ ತನಿಖಾ ರೀತಿಯಿಂದಾಗಿ ಪತ್ತೆಹಚ್ಚುವಿಕೆ ಮತ್ತು ಶಿಕ್ಷೆ ವಿಧಿಸುವಿಕೆ ದರ ಕುಗ್ಗಲು ಕಾರಣವಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ ಸೈಬರ್ ತಂತ್ರಜ್ಞರು ಮತ್ತು ವಕೀಲರು. ಕೆಲವು ವೇಳೆ ದೂರುದಾರರು ದೂರು ನೀಡಲು ವಿಳಂಬ ಮಾಡುತ್ತಾರೆ. ಬಹುಶಃ ಇದು ಅವರಿಗೆ ತಮ್ಮ ಹಕ್ಕಿನ ಬಗ್ಗೆ ಇರುವ ಗೊಂದಲ ಅಥವಾ ವ್ಯವಸ್ಥೆಯ ಮೇಲಿನ ಅಪನಂಬಿಕೆಯಿಂದಾಗಿ ಇರಬಹುದು. ವಾಸ್ತವದಲ್ಲಿ ನಡೆದಿರುವ ಸೈಬರ್ ಅಪರಾಧಗಳು ಮತ್ತು ದಾಖಲಾದ ದೂರಿನ ಮಧ್ಯೆ ಇರುವ ವ್ಯತ್ಯಾಸ ಈ ಮಾತಿಗೆ ಪುಷ್ಠಿ ನೀಡುತ್ತದೆ ಎಂದು ಸೈಬರ್ ಕಾನೂನು ವಕೀಲ ಎನ್ ಎಸ್ ನಪ್ಪಿನೈ ತಿಳಿಸುತ್ತಾರೆ.

 ಸೈಬರ್ ಅಪರಾಧ ಪತ್ತೆಗಾಗಿ ಪೊಲೀಸ್ ಇಲಾಖೆ ಪ್ರತಿ ಪೊಲೀಸ್ ಠಾಣೆಯಲ್ಲಿ ಏಳು ಸದಸ್ಯ ತಂಡದ ಸೈಬರ್ ಅಪರಾಧ ತನಿಖಾ ವಿಭಾಗವನ್ನು ಆರಂಭಿಸಿದ್ದು, ಸೋಮವಾರದಿಂದ ಐದು ದಿನಗಳ ತರಬೇತಿ ಶಿಬಿರ ಆರಂಭವಾಗಿದೆ.

ಒಬ್ಬ ಪೊಲೀಸ್ ನಿರೀಕ್ಷಕ, ಇಬ್ಬರು ಉಪನಿರೀಕ್ಷಕರು ಮತ್ತು ಮೂರರಿಂದ ನಾಲ್ಕು ಪೇದೆಗಳು ಈ ಸೈಬರ್ ಅಪರಾಧ ತನಿಖಾ ತಂಡದಲ್ಲಿರಲಿದ್ದಾರೆ. ಸೈಬರ್ ಅಪರಾಧಕ್ಕೆ ಬಲಿಯಾಗಿರುವವರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸುವಂತೆ ನಾವು ಸಾರ್ವಜನಿಕರಲ್ಲಿ ಮನವಿ ಮಾಡ್ತುತೇವೆ ಎಂದು ಮುಂಬೈ ಪೊಲೀಸ್ ವಕ್ತಾರ ಮತ್ತು ಪೊಲೀಸ್ ಸಹಾಯಕ ಆಯುಕ್ತ ದೀಪಕ್ ದೇವರಾಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News