ಪ್ರಧಾನಿಯ ನಡೆ- ನುಡಿಯ ನಡುವೆ ಅಜಗಜಾಂತರ ವ್ಯತ್ಯಾಸವಿದೆ: ಅಣ್ಣಾ ಹಝಾರೆ ಟೀಕೆ

Update: 2017-12-05 14:20 GMT

ಹೊಸದಿಲ್ಲಿ, ಡಿ.5: ಕಳೆದ ನಾಲ್ಕು ವರ್ಷಗಳಿಂದ ಲೋಕಪಾಲರನ್ನು ನೇಮಿಸಲು ಕೇಂದ್ರ ಸರಕಾರ ವಿಫಲವಾಗಿರುವುದನ್ನು ಖಂಡಿಸಿ ಮಾರ್ಚ್ 23ರಂದು ಪ್ರತಿಭಟನೆ ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ತಿಳಿಸಿದ್ದಾರೆ.

   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಣ್ಣಾ ಹಝಾರೆ, ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಬಿಜೆಪಿ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು. ಲೋಕಪಾಲ ಮಸೂದೆಗೆ ಇತ್ತೀಚೆಗೆ ನಡೆಸಲಾದ ತಿದ್ದುಪಡಿಯನ್ನು ಉಲ್ಲೇಖಿಸಿದ ಅವರು, ಜನಪ್ರತಿನಿಧಿಗಳು ತಮ್ಮ ಆಸ್ತಿಯನ್ನು ಘೋಷಿಸುವುದನ್ನು ಕಡ್ಡಾಯಗೊಳಿಸಿರುವ ಪರಿಚ್ಛೇದವನ್ನು ರದ್ದುಗೊಳಿಸಿರುವುದು ಸರಕಾರದ ಧೋರಣೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

 ಲೋಕಸಭೆಯಲ್ಲಿ ವಿಪಕ್ಷದ ನಾಯಕರಿಲ್ಲದ ಕಾರಣ ಲೋಕಪಾಲರನ್ನು ನೇಮಿಸಲು ಆಗುತ್ತಿಲ್ಲ ಎಂಬ ಕುಂಟು ನೆಪವನ್ನು ಸರಕಾರ ಮುಂದಿರಿಸಿದೆ. ಆದರೆ ಬಿಜೆಪಿ ಆಡಳಿತದ ರಾಜ್ಯಗಳಲ್ಲಾದರೂ ಲೋಕಾಯುಕ್ತರನ್ನು ನೇಮಿಸಬಹುದಿತ್ತು ಎಂದ ಅಣ್ಣಾ ಹಝಾರೆ, ಈ ಕುರಿತು ಎನ್‌ಡಿಎ ಸರಕಾರಕ್ಕೆ 30ಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದರೂ ಯಾವುದೇ ಉತ್ತರವಿಲ್ಲ. ಲೋಕಪಾಲರನ್ನು ಯಾಕೆ ನೇಮಿಸಿಲ್ಲ ಎಂದು ಪ್ರಶ್ನಿಸಿ ಬರೆದಿರುವ ಪತ್ರಕ್ಕೆ ಉತ್ತರಿಸಲು ಬಹುಷಃ ಕೇಂದ್ರ ಸರಕಾರಕ್ಕೆ ‘ಅಹಂ’ ಅಡ್ಡಿಯಾಗಿದೆ ಎಂದರು.

 ಸ್ವಾಮಿನಾಥನ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವ ತನ್ನ ಆಶ್ವಾಸನೆಯನ್ನು ಕೇಂದ್ರ ಸರಕಾರ ಮರೆತಿದೆ. 1995ರ ಬಳಿಕ ದೇಶದಲ್ಲಿ 12 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಕೇಂದ್ರ ಸರಕಾರ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿದೆ. ಪ್ರಧಾನಿಯವರ ನುಡಿ ಮತ್ತು ನಡೆಗೆ ಅಜಗಜಾಂತರ ವ್ಯತ್ಯಾಸವಿದೆ ಎಂದು ಹಝಾರೆ ಟೀಕಿಸಿದರು.

ಈ ಹಿಂದೆ 2011ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ ಅಣ್ಣಾ ಹಝಾರೆ ನಡೆಸಿದ್ದ ಪ್ರತಿಭಟನೆಗೆ ದೇಶದಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News