2004ರ ನಕಲಿ ಎನ್‌ಕೌಂಟರ್: ಪಾಂಡೆ ಅರ್ಜಿಗೆ ಸಂತ್ರಸ್ತನ ತಂದೆ ಆಕ್ಷೇಪ

Update: 2017-12-06 04:24 GMT

ಅಹ್ಮದಾಬಾದ್, ಡಿ.6: 2004ರ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ತಮ್ಮನ್ನು ದೋಷಮುಕ್ತಗೊಳಿಸುವಂತೆ ಕೋರಿ ಆರೋಪಿ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಪಿ.ಪಿ.ಪಾಂಡೆ ವಿಶೇಷ ಸಿಬಿಐ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಗೆ ಇಶ್ರತ್  ಜಹಾನ್ ಜತೆ ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾಗಿದ್ದ ಜಾವೇದ್ ಶೇಖ್ ಅಲಿಯಾಸ್ ಪ್ರಾಣೇಶ್ ಪಿಳ್ಳೈ ಅವರ ತಂದೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಶೇಷ ನ್ಯಾಯಾಧೀಶ ಜೆ.ಕೆ.ಪಾಂಡ್ಯ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿರುವ ಪ್ರಾಣೇಶ್ ಅವರ ತಂದೆ ಗೋಪಿನಾಥ್ ಪಿಳ್ಳೈ, ತನ್ನನ್ನು ಪ್ರತಿವಾದಿಯಾಗಿ ಪರಿಗಣಿಸುವಂತೆ ಕೋರಿದ್ದಾರೆ. ಪಾಂಡೆಯವರನ್ನು ದೋಷಮುಕ್ತಗೊಳಿಸುವುದರಿಂದ ಪಿತೂರಿಯನ್ನು ಬಯಲುಗೊಳಿಸಲು ಅಡ್ಡಿಯಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

"ಪಾಂಡೆಯವರನ್ನು ದೋಷಮುಕ್ತಗೊಳಿಸಿದರೆ ಪಿತೂರಿಯನ್ನು ಬಯಲುಗೊಳಿಸುವ ಪ್ರಯತ್ನಕ್ಕೆ ತಡೆಯಾಗಲಿದೆ. ಸಂತ್ರಸ್ತರ ಕುಟುಂಬಗಳಿಗೆ ಇದರಿಂದ ತೊಂದೆರೆಯಾಗುವುದು ಮಾತ್ರವಲ್ಲದೇ, ನ್ಯಾಯಸಮ್ಮತ ವಿಚಾರಣೆಗೂ ಇದರಿಂದ ಧಕ್ಕೆಯಾಗಲಿದೆ" ಎಂದು ಹೇಳಿದ್ದಾರೆ.

"ಪಾಂಡೆಯವರು ತನಿಖೆಯ ದಿಕ್ಕುತಪ್ಪಿಸಿ, ತಮ್ಮ ವಿರುದ್ಧದ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಸಿದ್ದಾರೆ. ಅಂದಿನ ಪೊಲೀಸ್ ಜಂಟಿ ಆಯುಕ್ತರಾಗಿದ್ದ ಪಾಂಡೆಯವರು ಈ ಅಪಹರಣ ಮತ್ತು ನಾಲ್ಕು ಮಂದಿಯ ಕೊಲೆಯಲ್ಲಿ ಪ್ರಮುಖ ಸಂಚುದಾರರರಾಗಿದ್ದರು. ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುವಲ್ಲಿ ತಾರತಮ್ಯ ಎಸಗಿರುವ ನಿದರ್ಶನ ಇದೆ" ಎಂದು ಗೋಪಿನಾಥ್ ಅರ್ಜಿಯಲ್ಲಿ ಹೇಳಿದ್ದಾರೆ.

ಜತೆಗೆ ಪಾಂಡೆಯವರು ಎಲ್ಲೂ ತಮ್ಮ ಅರ್ಜಿಯಲ್ಲಿ ಇದನ್ನು ನಿರಾಕರಿಸಿಲ್ಲ ಎಂದು ವಾದಿಸಿದ್ದಾರೆ. ಈ ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ನ್ಯಾಯಾಲಯ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News