×
Ad

ಶೇ.6ರಲ್ಲೇ ರೆಪೊ ದರ ಸ್ಥಿರಗೊಳಿಸಿದ ಆರ್‌ಬಿಐ

Update: 2017-12-06 20:16 IST

 ಹೊಸದಿಲ್ಲಿ, ಡಿ.6: ಎರಡು ದಿನ ನಡೆದ ಕಾರ್ಯನೀತಿ ಅವಲೋಕನ ಸಭೆಯ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರ(ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) ವನ್ನು ಶೇ.6ರಲ್ಲೇ ಸ್ಥಿರಗೊಳಿಸಿದೆ. ಅಲ್ಲದೆ ಮುಂದಿನ ಎರಡು ತ್ರೈಮಾಸಿಕ ಅವಧಿಯಲ್ಲಿ ಹಣದುಬ್ಬರದ ಪ್ರಮಾಣ ಹೆಚ್ಚಲಿದ್ದು ಶೇ.4.3- ಶೇ.4.7ರಷ್ಟು ಆಗಲಿದೆ ಎಂದು ಮುನ್ಸೂಚನೆ ನೀಡಿದೆ. ಕಚ್ಛಾ ತೈಲ ಬೆಲೆಯೇರಿಕೆ ಹಾಗೂ ತರಕಾರಿ ಬೆಲೆ ಏರಿಕೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಅಲ್ಲದೆ 2018ರ ಆರ್ಥಿಕ ವರ್ಷದ ಜಿವಿಎ (ಗ್ರಾಸ್ ವ್ಯಾಲ್ಯೂ ಆ್ಯಡೆಡ್) ಮುನ್ಸೂಚನೆಯನ್ನೂ ಶೇ.6.7ರಲ್ಲೇ ಸ್ಥಿರಗೊಳಿಸಿದೆ. ಡೆಬಿಟ್ ಕಾರ್ಡ್ ವ್ಯವಹಾರಗಳ ಶುಲ್ಕವನ್ನು ತರ್ಕಬದ್ಧಗೊಳಿಸುವ ಮೂಲಕ ಡಿಜಿಟಲ್ ಪಾವತಿ ಪ್ರಕ್ರಿಯೆಗೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ. ಆರ್ಥಿಕ ನೀತಿ ಸಮಿತಿ(ಎಂಪಿಸಿಯ) ಆರು ಸದಸ್ಯರಲ್ಲಿ ಐವರು ರೆಪೊ ದರ ಸ್ಥಿರವಾಗಿರಬೇಕೆಂದು ಅಭಿಪ್ರಾಯಪಟ್ಟರೆ, ಮತ್ತೋರ್ವ ಸದಸ್ಯ ರವೀಂದ್ರ ಢೋಲಕಿಯಾ 25 ಮೂಲಾಂಕ ದರ ಕಡಿತಕ್ಕೆ ಸಲಹೆ ಮಾಡಿದರು.

  ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್, ಕೃಷಿ ಸಾಲ ಮನ್ನಾ, ತೈಲಗಳ ಮೇಲಿನ ಆಂಶಿಕ ತೆರಿಗೆ ವಾಪಸಾತಿ, ಕೆಲವು ವಸ್ತುಗಳ ಮೇಲಿನ ಜಿಎಸ್‌ಟಿ ದರ ಕಡಿತ ಮುಂತಾದವುಗಳಿಂದ ಆರ್ಥಿಕತೆಯಲ್ಲಿ ಇಳಿಕೆ ಕಂಡುಬರುವ ಸಾಧ್ಯತೆಯಿದೆ ಎಂದು ಹೇಳಿದರು. ಅಲ್ಲದೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಿಗೆ 2.11 ಲಕ್ಷ ಕೋಟಿ ಮರುಬಂಡವಾಳ ಬಾಂಡ್ ಒದಗಿಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ . ಬ್ಯಾಂಕ್‌ಗಳಿಗೆ ಬಂಡವಾಳ ಪೂರೈಸುವುದಷ್ಟೇ ಅಲ್ಲ, ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸುಧಾರಣೆಯ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಈ ಯೋಜನೆ ಒಳಗೊಂಡಿದೆ ಎಂದು ಪಟೇಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News