ಗುಜರಾತ್ ಚುನಾವಣೆ: ಬಿಜೆಪಿಗೆ ‘ನೋಟಾ’ದ ಭೀತಿ !
ಅಹ್ಮದಾಬಾದ್, ಡಿ.6: ಮುಂಬರುವ ಗುಜರಾತ್ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಪ್ರಪ್ರಥಮ ಬಾರಿಗೆ ‘ನೋಟಾ’ ಮತ (ಇದರಲ್ಲಿ ಯಾರೂ ಅಲ್ಲ ಎಂಬ ಆಯ್ಕೆ ಮಾಡುವ ವ್ಯವಸ್ಥೆ) ಚಲಾವಣೆಗೆ ಅವಕಾಶ ನೀಡಲಾಗಿದ್ದು’ ಇದು ಬಿಜೆಪಿಯ ಆತಂಕಕ್ಕೆ ಕಾರಣವಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಜಿಎಸ್‌ಟಿ ಅನುಷ್ಠಾನದಿಂದ ಬಿಜೆಪಿ ಕುರಿತು ಅಸಮಾಧಾನಗೊಂಡಿರುವ ಕೆಲವು ಸಮುದಾಯದವರು ಹಾಗೂ ಸಣ್ಣ ಮತ್ತು ಮಧ್ಯಮ ವ್ಯವಹಾರಸ್ತರು ‘ನೋಟಾ’ ಅವಕಾಶ ಬಳಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. 2012ರ ವಿಧಾನಸಭೆ ಚುನಾವಣೆಯಲ್ಲಿ ಈ ಅವಕಾಶ ಲಭ್ಯವಿರಲಿಲ್ಲ.
ಆದರೆ ಇದನ್ನು ಬಿಜೆಪಿ ನಿರಾಕರಿಸಿದ್ದು, ರಾಜ್ಯದ ಜನತೆ ಬಿಜೆಪಿಯ ಮೇಲೆ ಭರವಸೆ ಇಟ್ಟಿರುವುದು ಇತ್ತೀಚಿನ ಪಂಚಾಯತ್ ಚುನಾವಣೆಯ ಫಲಿತಾಂಶದಿಂದ ಸಾಬೀತಾಗಿದೆ ಎಂದಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಗುಜರಾತ್‌ನಲ್ಲಿ 4.20 ಲಕ್ಷಕ್ಕೂ ಹೆಚ್ಚು ಮತದಾರರು ‘ನೋಟ’ ಆಯ್ಕೆ ಮಾಡಿಕೊಂಡಿದ್ದರು ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಮಧ್ಯ ಮತ್ತು ಪಶ್ಚಿಮ ಭಾರತದಲ್ಲಿ ಬಲವಾದ ಆಡಳಿತ ವಿರೋಧಿ ಅಲೆಯಿದ್ದು ಕಾಂಗ್ರೆಸ್ ಆಗ ರಾಜಕೀಯವಾಗಿ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿ ಎದುರಿಸುತ್ತಿತ್ತು. ಆದರೂ 4.20 ಲಕ್ಷ ಮತದಾರರು ಬಿಜೆಪಿಯ ಬದಲು ‘ನೋಟಾ’ವನ್ನು ಆಯ್ಕೆ ಮಾಡಿಕೊಂಡಿರುವುದು ಗಮನಾರ್ಹವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಈ ಹಿಂದೆ ಬಿಜೆಪಿಯನ್ನು ಬೆಂಬಲಿಸಿದ್ದ ಕೆಲವು ಸಾಮಾಜಿಕ , ಆರ್ಥಿಕ ವಿಭಾಗಗಳು, ಸಣ್ಣ ಮತ್ತು ಮಧ್ಯಮ ವ್ಯವಹಾರಸ್ತರು ಜಿಎಸ್‌ಟಿ ವಿಷಯದಲ್ಲಿ ಬಿಜೆಪಿಯ ಬಗ್ಗೆ ಅಸಮಾಧಾನಗೊಂಡಿರುವ ಕಾರಣ ‘ನೋಟಾ’ ಅವಕಾಶ ಬಳಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಆದರೆ ಬಿಜೆಪಿ ಮುಖಂಡರ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಯುವ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಯುವಜನತೆ ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಂದ ಸಂತುಷ್ಟರಾಗಿದ್ದಾರೆ. ಕೆಲವರು ಬಿಜೆಪಿ ಅಭ್ಯರ್ಥಿಗೆ ಮತ ಹಾಕುವ ಬದಲು ‘ನೋಟಾ’ವನ್ನು ಆಯ್ಕೆ ಮಾಡಬಹುದು. ಆದರೆ ತಮಗೆ ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡವರ ಬೆಂಬಲವಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ‘ನೋಟಾ’ ಮತ ಕೇವಲ ಬಿಜೆಪಿಗೆ ಮಾತ್ರವಲ್ಲ, ಎಲ್ಲಾ ಪ್ರಮುಖ ಪಕ್ಷಗಳಿಗೂ ಒಂದು ಹಿನ್ನಡೆಯಾಗಲಿದೆ ಎಂದವರು ಹೇಳಿದ್ದಾರೆ.
ಈ ಮಧ್ಯೆ, ರಾಜ್ಯದಲ್ಲಿ ಕಾಂಗ್ರೆಸ್ 182 ಸ್ಥಾನಗಳ ಪೈಕಿ 78 ಸ್ಥಾನ ಗೆಲ್ಲುವ ಸಾಧ್ಯತೆಯಿರುವುದಾಗಿ ಹೊಸ ಸಮೀಕ್ಷೆ ತಿಳಿಸಿದೆ. ಬಿಜೆಪಿ ವಿರೋಧಿ ಮತಗಳು, ಬಿಜೆಪಿ ಹೊರತಾದ ಮತಗಳು ಹಾಗೂ ‘ನೋಟ’ ಮತಗಳಿಂದ ಕಾಂಗ್ರೆಸ್ ಇನ್ನೂ ಕೆಲವು ಸ್ಥಾನಗಳಲ್ಲಿ ಜಯ ಗಳಿಸುವ ವಿಶ್ವಾಸವನ್ನು ಕಾಂಗ್ರೆಸ್ ಮುಖಂಡರು ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಪಾಟಿದಾರ್ ಸಮುದಾಯದ ಮತಗಳನ್ನು ಸೆಳೆಯಲು ಹಾರ್ದಿಕ್ ಪಟೇಲ್, ಒಬಿಸಿ ಮತಗಳನ್ನು ಸೆಳೆಯಲು ಅಲ್ಪೇಶ್ ಠಾಕೂರ್ ಮತ್ತು ಜಿಗ್ನೇಶ್ ಮೆವಾನಿ ಪ್ರಯತ್ನ ನಡೆಸಿರುವುದೂ ಬಿಜೆಪಿಯ ನಿದ್ದೆಗೆಡಿಸಿದೆ. ಒಟ್ಟಿನಲ್ಲಿ ಈ ಬಾರಿಯ ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಅಷ್ಟೊಂದು ಸುಲಭವಲ್ಲ ಎಂಬುದಂತೂ ಸ್ಪಷ್ಟವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.