ಜೆಎನ್‌ಯು: ಸುಬ್ರಮಣಿಯನ್ ಸ್ವಾಮಿ, ಪ್ರಕಾಶ್ ಕಾರಟ್ ಉಪನ್ಯಾಸಗಳು ರದ್ದು

Update: 2017-12-06 15:17 GMT

ಹೊಸದಿಲ್ಲಿ, ಡಿ.6: ಬಾಬರಿ ಮಸೀದಿ ಧ್ವಂಸದ 25ನೇ ವಾರ್ಷಿಕ ದಿನವಾದ ಬುಧವಾರ ರಾಮ ಮಂದಿರ ಕುರಿತು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರ ನಿಗದಿತ ಉಪನ್ಯಾಸವನ್ನು ರದ್ದುಗೊಳಿಸಿ ಸಿಪಿಎಂ ನಾಯಕ ಪ್ರಕಾಶ್ ಕಾರಟ್ ಅವರ ಉಪನ್ಯಾಸಕ್ಕೆ ಅವಕಾಶ ಕಲ್ಪಿಸಿದ್ದಕ್ಕಾಗಿ ಟೀಕೆಗೊಳಗಾಗಿದ್ದ ಇಲ್ಲಿಯ ಜವಾಹರಲಾಲ ನೆಹರು ವಿವಿ(ಜೆಎನ್‌ಯು)ಯು ಕಾರಟ್ ಕಾರ್ಯಕ್ರಮವನ್ನೂ ರದ್ದುಗೊಳಿಸಿದೆ. ಕೋಮು ಸೌಹಾರ್ದವನ್ನು ಕಾಯ್ದುಕೊಳ್ಳಲು ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಅದು ಹೇಳಿದೆ.

ಕೊಯ್ನ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಲಾಗಿದ್ದ ‘ಅಯೋಧ್ಯೆಯಲ್ಲೇಕೆ ರಾಮ ಮಂದಿರ?’ಎಂಬ ವಿಷಯದ ಕುರಿತು ಸ್ವಾಮಿಯವರ ಉಪನ್ಯಾಸವನ್ನು ರದ್ದುಗೊಳಿಸಲಾಗಿದೆ ಎಂದು ಈ ಮೊದಲು ವರದಿಯಾಗಿತ್ತು. ಕಾರ್ಯಕ್ರಮ ರದ್ದತಿಗೆ ಯಾವುದೇ ಕಾರಣವನ್ನು ವಿವಿ ನೀಡಿರಲಿಲ್ಲ.

ಸ್ವಾಮಿ ಭಾಷಣ ಮಾಡಲಿದ್ದ ಅದೇ ಸಮಯಕ್ಕೆ ಸಾಬರಮತಿ ವಿದ್ಯಾರ್ಥಿನಿಲಯದಲ್ಲಿ ಕಾರಟ್ ಅವರು ‘ಪ್ರಜಾಪ್ರಭುತ್ವದ ಸುಧಾರಣೆ’ ಕುರಿತು ಮಾತನಾಡಲಿದ್ದು, ಬಾಬರಿ ಮಸೀದಿ ಧ್ವಂಸ ಕುರಿತು ಚರ್ಚಿಸಲಿದ್ದರು.

ಕಾರಟ್ ಕಾರ್ಯಕ್ರಮವನ್ನು ಎಡಪಕ್ಷಗಳ ಸದಸ್ಯರನ್ನೊಳಗೊಂಡಿರುವ ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟ(ಜೆಎನ್‌ಯುಎಸ್‌ಯು) ಆಯೋಜಿಸಿದ್ದು, ಜಯತಿ ಘೋಷ್ ಮತ್ತು ಕವಿತಾ ಕೃಷ್ಣನ್ ಅವರೂ ಭಾಗವಹಿಸಲಿದ್ದರು. ಅತ್ತ ಸ್ವಾಮಿ ಕಾರ್ಯಕ್ರಮವನ್ನು ನಿರ್ದಿಷ್ಟ ಸಂಘಟನೆಗೆ ಒಳಪಡದ ‘ಆಸಕ್ತ ವಿದ್ಯಾರ್ಥಿಗಳ’ ಗುಂಪು ಏರ್ಪಡಿಸಿತ್ತು.

ರಾಮ ಮಂದಿರ ಪರವಾಗಿ ತನ್ನ ಪ್ರಬಲ ವಾದಗಳಿಗೆ ಹೆದರಿ ಜೆಎನ್‌ಯು ಅಧಿಕಾರಿಗಳು ತನ್ನ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ ಎಂದು ಟಿವಿ ಸಂದರ್ಶನವೊಂದರಲ್ಲಿ ಟೀಕಿಸಿದ್ದ ಸ್ವಾಮಿ, ಸ್ವಲ್ಪ ಧೈರ್ಯವನ್ನು ಬೆಳೆಸಿಕೊಳ್ಳುವಂತೆ ವಿವಿಯ ಕುಲಪತಿ ಎಂ.ಜಗದೀಶ ಕುಮಾರ್ ಅವರಿಗೆ ಸಲಹೆ ನೀಡಿದ್ದರು. ಭದ್ರತೆಯ ಬಗ್ಗೆ ಅವರಿಗೆ ಕಳವಳವಳವಿದ್ದರೆ ನಮಗೆ ತಿಳಿಸಲಿ, ನಾವೇ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತೇವೆ ಎಂದೂ ಅವರು ಹೇಳಿದ್ದರು.

ಸ್ವಾಮಿ ಕಾರ್ಯಕ್ರಮದ ರದ್ದತಿಗೂ ತಮ್ಮ ಒಕ್ಕೂಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಜೆಎನ್‌ಯುಎಸ್‌ಯುದ ಉಪಾಧ್ಯಕ್ಷ ಸಿಮೋನ್ ರೆಯಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಜೆಎನ್‌ಯುನಲ್ಲಿ ಉಪನ್ಯಾಸಗಳನ್ನು ಏರ್ಪಡಿಸಲು ವಿವಿಯ ವಿವಿಧ ಅಧಿಕಾರಿಗಳಿಂದ ಅನುಮತಿಗಳನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದ ಜೆಎನ್‌ಯು ವಿದ್ಯಾರ್ಥಿ ಅಮೀರ್ ಮಲಿಕ್, ಇಂತಹ ಸೂಕ್ಷ್ಮ ವಿಷಯದ ಮೇಲೆ ಸ್ವಾಮಿಯಂತಹ ವ್ಯಕ್ತಿಗಳಿಂದ ಬಹಿರಂಗ ಉಪನ್ಯಾಸಕ್ಕೆ ವಿವೇಚನೆಯಿರುವ ಯಾರೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News