ರಾಜಸ್ಥಾನ: ಪೊಲೀಸ್ ಗುಂಡೇಟಿಗೆ ಗೋಸಾಗಾಟಗಾರ ಮೃತ್ಯು

Update: 2017-12-07 10:25 GMT

ಆಲ್ವಾರ್, ಡಿ.7: ಪಿಕ್-ಅಪ್ ವಾಹನವೊಂದರಲ್ಲಿ ದನಗಳ ಕಳ್ಳಸಾಗಣೆ ಮಾಡುತ್ತಿದ್ದನೆನ್ನಲಾದ ವ್ಯಕ್ತಿಯೊಬ್ಬನನ್ನು ಪೊಲೀಸರು ಗುಂಡಿಕ್ಕಿ ಸಾಯಿಸಿದ ಘಟನೆ ರಾಜಸ್ಥಾನದ ಆಲ್ವಾರ್ ಎಂಬಲ್ಲಿ ಗುರುವಾರ ಬೆಳಗ್ಗಿನ ಜಾವ 2.30ರ ಸುಮಾರಿಗೆ ನಡೆದಿರುವುದು ವರದಿಯಾಗಿದೆ. 

ಮೃತನ ಗುರುತು ಪತ್ತೆಯಾಗಿಲ್ಲ. ಆದರೆ ಘಟನೆ ನಡೆದಾಗ ಆತನ ಜೊತೆಗಿದ್ದರೆನ್ನಲಾದ ಐದಾರು ಮಂದಿ ಜನತಾ ಕಾಲನಿಯ ಪ್ರದೇಶದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಝಂಕಾರ್ ಹೋಟೆಲ್ ಹಾಗೂ ಇಂದಿರಾ ಗಾಂಧಿ ಸ್ಟೇಡಿಯಂ ಬಳಿ ಅಲೆಮಾರಿ ದನಗಳನ್ನು ಒಟ್ಟುಗೂಡಿಸಲಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ರಾತ್ರಿ 1:30ರ ಸುಮಾರಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರಲ್ಲದೆ ಹಲವೆಡೆ ಬ್ಯಾರಿಕೇಡುಗಳನ್ನೂ ಅಳವಡಿಸಿದ್ದರು. ಈ ವೇಳೆ ಗೋಸಾಗಾಟಗಾರರು ಬ್ಯಾರಿಕೇಡ್ ಗಳ ಮೇಲೆಯೇ ವಾಹನ ಚಲಾಯಿಸಿದ್ದರೆನ್ನಲಾಗಿದೆ. ಬಳಿಕ ಇಲ್ಲಿನ ಜನತಾ ಕಾಲನಿ ಸಮೀಪ ಗೋಸಾಗಾಟಗಾರರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಹೇಳಲಾಗಿದ್ದು, ಈ ವೇಳೆ ಗೋಸಾಗಾಟನಿಗೆ ಪೊಲೀಸರು ಹಾರಿಸಿದ ಗುಂಡು ತಗಲಿತ್ತು. ಇದೇ ಸಂದರ್ಭ ಆರೋಪಿಗಳಿದ್ದ ವಾಹನದ ಟಯರ್ ಕೂಡ ಸ್ಫೋಟಗೊಂಡ ಪರಿಣಾಮ ಗಾಯಾಳುವೊಬ್ಬನನ್ನು ಬಿಟ್ಟು ಉಳಿದೆಲ್ಲರೂ ಪರಾರಿಯಾಗಿದ್ದಾರೆ.

ಗೋಸಾಗಾಟಗಾರರು ಬಿಟ್ಟು ಹೋದ ವಾಹನದಲ್ಲಿ ದೇಶಿ ನಿರ್ಮಿತ ಬಂದೂಕು ಹಾಗೂ ಬುಲೆಟ್ ಗಳಿದ್ದವು ಎಂದು ಪೊಲೀಸರು ಹೇಳಿದ್ದಾರೆ. ವಾಹನದಲ್ಲಿದ್ದ ಐದು ದನಗಳನ್ನು ಸ್ಥಳೀಯ ಗೋ ಆಶ್ರಯತಾಣಕ್ಕೆ ಕಳುಹಿಸಲಾಗಿದೆ.

ಗೋವುಗಳನ್ನು ಕಳವುಗೈದಿದ್ದಾನೆಂಬ ಶಂಕೆಯಿಂದ ವ್ಯಕ್ತಿಯೊಬ್ಬನ ಕೊಲೆ ನಡೆದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News