ಮೋದಿಯನ್ನು ನೀಚ ಎಂದು ಕರೆದ ಮಾಜಿ ಕೇಂದ್ರ ಸಚಿವ ಅಯ್ಯರ್ ಕಾಂಗ್ರೆಸ್‌ನಿಂದ ಅಮಾನತು

Update: 2017-12-08 03:54 GMT

ಹೊಸದಿಲ್ಲಿ/ ಸೂರತ್, ಡಿ. 8: ಪ್ರಧಾನಿ ನರೇಂದ್ರ ಮೋದಿಯವರನ್ನು ನೀಚ ವ್ಯಕ್ತಿ ಎಂದು ಕರೆದು ವಿವಾದಕ್ಕೆ ಗುರಿಯಾಗಿದ್ದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಮಣಿಶಂಕರ ಅಯ್ಯರ್ ಅವರನ್ನು ಕಾಂಗ್ರೆಸ್ ಪಕ್ಷ ಅಮಾನತು ಮಾಡಿದೆ.

ಅಯ್ಯರ್ ಅವರ ಹೇಳಿಕೆಯನ್ನು ಸೂರತ್‌ನಲ್ಲಿ ಮೋದಿ ಕಟುವಾಗಿ ಟೀಕಿಸಿರುವುದು ಮಾತ್ರವಲ್ಲದೇ, ಅವರ ಪಕ್ಷದವರಿಂದಲೇ ಇದಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.

ಅಯ್ಯರ್ ಹೇಳಿಕೆ, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಾನಿ ತರಲಿದೆ ಎಂಬ ಭೀತಿ ಕಾಂಗ್ರೆಸ್ಸಿಗರಲ್ಲಿದೆ. "ಮೋದಿ ನೀಚ ವ್ಯಕ್ತಿ. ಅವರಿಗೆ ಸಭ್ಯತೆಯೂ ಇಲ್ಲ" ಎಂದು ಅಯ್ಯರ್ ಬಣ್ಣಿಸಿದ್ದರು. ಇದಕ್ಕೂ ಮುನ್ನ ಮೋದಿ, "ಕಾಂಗ್ರೆಸ್ ಪಕ್ಷ ದಲಿತ ಮುಖಂಡ ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ಕೇವಲ ಮತ ಪಡೆಯಲು ಮಾತ್ರ ಬಳಸಿಕೊಳ್ಳುತ್ತಿದೆ. ಭಾರತ ನಿರ್ಮಾಣದಲ್ಲಿ ಅವರ ಕೊಡುಗೆಯನ್ನು ಕಡೆಗಣಿಸಿದೆ" ಎಂದು ಹೇಳಿದ್ದರು.

ಸೂರತ್‌ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಅಯ್ಯರ್ ಮತ್ತು ಕಾಂಗ್ರೆಸ್ ಮುಖಂಡರ ಮೇಲೆ ವಾಗ್ದಾಳಿ ನಡೆಸಿ, "ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಸಭ್ಯತೆಯ ಎಲ್ಲೆ ಮೀರಿದ್ದಾರೆ. ಅಯ್ಯರ್ ನನ್ನನ್ನು ನೀಚ ಹಾಗೂ ನೀಚ ಜಾತಿಯ ವ್ಯಕ್ತಿ ಎಂದು ಕರೆದಿದ್ದಾರೆ. ಇದು ಗುಜರಾತಿಗಳಿಗೆ ಅವಮಾನವಲ್ಲವೇ? ಭಾರತೀಯ ಮೌಲ್ಯಗಳನ್ನು ಅವಮಾನಿಸಿದಂತಲ್ಲವೇ? ಆದರೆ ಗುಜರಾತ್ ಜನ ಇದಕ್ಕೆ ಡಿ. 18ರಂದು ಪ್ರತೀಕಾರ ತೆಗೆದುಕೊಳ್ಳಲಿದ್ದಾರೆ. ನೀಚ ಎಂಬ ಪದದ ನಿಜ ಅರ್ಥವನ್ನು ಕಲಿಸಲಿದ್ದಾರೆ" ಎಂದು ಹೇಳಿದ್ದಾರೆ.

ಅಯ್ಯರ್ ಹೇಳಿಕೆ ಕಾಂಗ್ರೆಸ್ ಪಕ್ಷದ ಮೊಘಲ್ ಮನೋಭಾವವನ್ನು ಬಿಂಬಿಸುತ್ತದೆ. ಮೊಘಲರು ಕೆಳ ಹಾಗೂ ಮೇಲ್ವರ್ಗದ ಮಧ್ಯೆ ತಾರತಮ್ಯ ಎಸಗಿದ್ದರು ಎಂದು ಮೋದಿ ತಿರುಗೇಟು ನೀಡಿದ್ದಾರೆ.

"ನಾನು 14 ವರ್ಷ ಮುಖ್ಯಮಂತ್ರಿಯಾಗಿದ್ದು, ಈಗ ಪ್ರಧಾನಿಯಾಗಿದ್ದೇನೆ. ಆದರೆ ಜನ ತಲೆ ತಗ್ಗಿಸುವ ಯಾವ ಕೆಲಸವನ್ನೂ ಮಾಡಿಲ್ಲ. ಬಡವರಿಗಾಗಿ ಮತ್ತು ದುರ್ಬಲರಿಗಾಗಿ ಕೆಲಸ ಮಾಡುವುದನ್ನು ಕಾಂಗ್ರೆಸ್ ಪಕ್ಷ ನೀಚ ಕೆಲಸ ಎಂದುಕೊಂಡಿದ್ದರೆ ಅವರಿಗೆ ಒಳ್ಳೆಯದಾಗಲಿ ಎಂದಷ್ಟೇ ಹಾರೈಸಬಲ್ಲೆ" ಎಂದು ವ್ಯಂಗ್ಯವಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News