ರೊನಾಲ್ಡೊಗೆ ಐದನೆ ಬಾರಿ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ

Update: 2017-12-08 04:10 GMT

ಪ್ಯಾರೀಸ್, ಡಿ. 8: ರಿಯಲ್ ಮ್ಯಾಡ್ರಿಡ್‌ನ ಮುನ್ಪಡೆ ಆಟಗಾರ, ಫುಟ್‌ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ಐದನೆ ಬಾರಿಗೆ ವರ್ಷದ ಫುಟ್‌ಬಾಲ್ ಆಟಗಾರ ಪ್ರಶಸ್ತಿ ಪಡೆಯುವ ಮೂಲಕ ವಿಶ್ವದಾಖಲೆ ಸರಿಗಟ್ಟಿದ್ದಾರೆ. ಬಾರ್ಸಿಲೋನಾ ತಾರೆ ಲಿಯೊನೆಲ್ ಮೆಸ್ಸಿಯವರ ದಾಖಲೆಯನ್ನು ರೊನಾಲ್ಡೊ ಸರಿಗಟ್ಟಿದಂತಾಗಿದೆ.

ಫ್ರಾನ್ಸ್‌ನ ಫುಟ್‌ಬಾಲ್ ನಿಯತಕಾಲಿಕ ಕೊಡಮಾಡುವ ಈ ಪ್ರಶಸ್ತಿಯನ್ನು ಐಫೆಲ್ ಟವರ್ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ಮೆಸ್ಸಿ ಹಾಗೂ ನೇಮರ್ ಅವರನ್ನು ಹಿಂದಿಕ್ಕಿ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು. ನೇಮರ್ ಈ ವರ್ಷ ಬಾರ್ಸಿಲೋನಾ ತಂಡದಿಂದ ದಾಖಲೆ ಮೊತ್ತವಾದ 222 ದಶಲಕ್ಷ ಯೂರೊ ಮೌಲ್ಯ ಪಡೆದು ಪ್ಯಾರೀಸ್ ಸೈಂಟ್ ಜರ್ಮೆನ್‌ಗೆ ಸೇರ್ಪಡೆಯಾಗಿದ್ದರು. ಮೆಸ್ಸಿ ಹಾಗೂ ನೇಮರ್ 2 ಹಾಗೂ 3ನೇ ಸ್ಥಾನಕ್ಕೆ ತೃಪ್ತಿಪಟ್ಟರು.

"ನನಗೆ ಅತೀವ ಸಂತಸವಾಗಿದೆ. ಇದು ನನ್ನ ವೃತ್ತಿಜೀವನದ ಮಹತ್ವದ ಕ್ಷಣ. ಬಹುಶಃ ಇದನ್ನು ಪ್ರತಿ ವರ್ಷ ಗೆಲ್ಲಬೇಕೆಂಬ ಅಭಿಲಾಷೆ ನನ್ನದು" ಎಂದು ರೊನಾಲ್ಡೊ ನುಡಿದರು.

32 ವರ್ಷದ ಪೋರ್ಚ್‌ಗಲ್ ಆಟಗಾರ ಇದಕ್ಕೂ ಮುನ್ನ 2013, 2014 ಮತ್ತು 2008ರಲ್ಲಿ ಕೂಡಾ ಪ್ರಶಸ್ತಿ ಪಡೆದಿದ್ದರು. ಕಳೆದ ವರ್ಷ ಪೋರ್ಚ್‌ಗಲ್ ತಂಡ ಯೂರೋಪಿಯನ್ ಕಪ್ ಪ್ರಶಸ್ತಿ ಪಡೆಯಲು ಮಹತ್ವದ ಪಾತ್ರ ವಹಿಸಿ, ಮತ್ತೆ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದರು. ಮೆಸ್ಸಿ 2009-2012 ಮತ್ತು 2015ರಲ್ಲಿ ಪ್ರಶಸಿಗೆ ಭಾಜನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News