×
Ad

ಜಿಗರ್‌ಥಂಡಾ ರಿಮೇಕ್‌ಗೆ ದೇವಗನ್ ನಿರ್ಮಾಪಕ

Update: 2017-12-08 17:34 IST

ಆ್ಯಕ್ಷನ್, ಹಾಸ್ಯ, ಸೆಂಟಿಮೆಂಟ್ಸ್... ಹೀಗೆ ಎಲ್ಲಾ ರೀತಿಯ ಪಾತ್ರಗಳಲ್ಲಿಯೂ ತನ್ನದೇ ಆದ ವಿಶಿಷ್ಟವಾದ ಅಭಿನಯ ಛಾಪು ಮೂಡಿಸಿರುವ ಬಾಲಿವುಡ್ ನಟ ಅಜಯ್‌ದೇವಗನ್, ಚಿತ್ರ ನಿರ್ಮಾಪಕರಾಗಿಯೂ ಸೈ ಅನಿಸಿಕೊಂಡಿದ್ದಾರೆ. ಅಜಯ್ ಚೊಚ್ಚಲ ನಿರ್ಮಾಣದ ಚಿತ್ರ ‘ಶಿವಾಯ್’ ಕಳೆದ ವರ್ಷ ತೆರೆಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಚೆನ್ನಾಗಿಯೇ ಓಡಿತ್ತು. ಕರಣ್‌ಜೋಹರ್ ನಿರ್ದೇಶನದ, ‘ಯೇ ದಿಲ್ ಹೈ ಮುಶ್ಕಿಲ್’ ಚಿತ್ರದ ತೀವ್ರ ಪೈಪೋಟಿಯ ನಡುವೆಯೂ ‘ಶಿವಾಯ್’ ಯಶಸ್ಸು ಕಂಡಿತ್ತು. ಶಿವಾಯ್ ಗೆಲುವಿನಿಂದ ಉತ್ತೇಜನಗೊಂಡಿರುವ ಅಜಯ್ ಮತ್ತೊಮ್ಮೆ ನಿರ್ಮಾಪಕರಾಗುತ್ತಿದ್ದಾರೆ. 2014ರ ಸೂಪರ್‌ಹಿಟ್ ತಮಿಳು ಚಿತ್ರ ‘ಜಿಗರ್‌ತಂಡಾ’ವನ್ನು ಅವರು ಬಾಲಿವುಡ್‌ಗೆ ರಿಮೇಕ್ ಮಾಡುತ್ತಿದ್ದಾರೆ.

ಮಲಯಾಳಂ ದೃಶ್ಯಂನ ಬಾಲಿವುಡ್ ರಿಮೇಕ್‌ನ ನಿರ್ದೇಶಕ ನಿಶಿಕಾಂತ್ ಕಾಮತ್, ಹಿಂದಿ ‘ಜಿಗರ್‌ಥಂಡಾ’ಗೆ ಆ್ಯಕ್ಷನ್‌ಕಟ್ ಹೇಳಲಿದ್ದಾರೆ. ವಿಶೇಷವೆಂದರೆ, ಈ ಚಿತ್ರದಲ್ಲಿ ದೇವಗನ್ ನಟಿಸೋದಿಲ್ವಂತೆ. ಫರ್ಹಾನ್ ಅಖ್ತರ್ ಹಾಗೂ ಸಂಜಯ್‌ದತ್ ಅವರು ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಬಾಹುಬಲಿ’ ಖ್ಯಾತಿಯ ನಟಿ ತಮನ್ನಾ, ನಾಯಕಿಯಾಗಿ ಮಿಂಚಲಿದ್ದಾರೆ. ತಮಿಳು ಜಿಗರ್‌ಥಂಡಾದಲ್ಲಿ ಸಿದ್ಧಾರ್ಥ, ಬಾಬ್ಬಿಸಿಂಹ ಹಾಗೂ ಲಕ್ಷ್ಮೀ ಮೆನನ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಗ್ಯಾಂಗ್‌ಸ್ಟರ್‌ಗಳ ಕಥಾವಸ್ತುವುಳ್ಳ ತಮಿಳು ಚಿತ್ರ ‘ಜಿಗರ್‌ಥಂಡಾ’, 2014ರಲ್ಲಿ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿತ್ತು. ಚಿತ್ರದ ನಾಯಕ ಬಾಬ್ಬಿಸಿಂಹ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರೆ, ವಿವೇಕ್ ಹರ್ಷನ್‌ಗೆ ಶ್ರೇಷ್ಠ ಸಂಕಲನದ ಪ್ರಶಸ್ತಿ ಲಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News