ಕಿಚ್ಚ ಪೈಲ್ವಾನ್
ಕಿಚ್ಚ ಸುದೀಪ್, ಸದ್ಯ ಪ್ರೇಮ್ ನಿರ್ದೇಶನದ ಅದ್ದೂರಿ ಚಿತ್ರ ‘ವಿಲನ್’ನಲ್ಲಿ ಬ್ಯುಸಿಯಾಗಿದ್ದರೆ, ಅವರು ನಾಯಕನಾಗಿ ನಟಿಸುತ್ತಿರುವ ಇನ್ನೊಂದು ಚಿತ್ರ ‘ಪೈಲ್ವಾನ್’ನ ಕೆಲಸವನ್ನು ನಿರ್ದೇಶಕ ಎಸ್.ಕೃಷ್ಣ ಆರಂಭಿಸಿದ್ದಾರೆ. ಅಪ್ಪಟ ಆ್ಯಕ್ಷನ್ ಚಿತ್ರವಾದ ‘ಪೈಲ್ವಾನ್’ ನಲ್ಲಿ ಸುದೀಪ್ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಪೈಲ್ವಾನ್’ ಅನೌನ್ಸ್ ಆದಾಗಿನಿಂದ ಚಿತ್ರದ ಬಗ್ಗೆ ಕನ್ನಡ ಚಿತ್ರರಸಿಕರಲ್ಲಿ ಇನ್ನಿಲ್ಲದ ಕುತೂಹಲ ಉಂಟಾಗಿದೆ.
ಈಗಾಗಲೇ ಚಿತ್ರದ ಹಾಡುಗಳ ಧ್ವನಿಮುದ್ರಣ ಮುಗಿದಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಐದರಿಂದ ಆರು ಹಾಡುಗಳಿವೆಯೆಂಬ ವದಂತಿಗಳೂ ಸ್ಯಾಂಡಲ್‌ವುಡ್‌ನಲ್ಲಿ ಕೇಳಿಬರುತ್ತಿವೆ.
ವಿಲನ್ ಚಿತ್ರದ ಶೂಟಿಂಗ್ ಜನವರಿ 10ರೊಳಗೆ ಮುಕ್ತಾಯ ವಾಗಲಿದೆ. ಆನಂತರ ಜನವರಿ 15ರಂದು ಮಕರಸಂಕ್ರಾಂತಿಯಂದು ಕಿಚ್ಚ ಸುದೀಪ್ ‘ಪೈಲ್ವಾನ್’ಗಾಗಿ ಬಣ್ಣ ಹಚ್ಚಲಿದ್ದಾರೆ. ಈ ಮಧ್ಯೆ ಕೃಷ್ಣ ಚಿತ್ರದ ಉಳಿದ ಪಾತ್ರವರ್ಗಗಳ ಆಯ್ಕೆಯನ್ನು ಅಂತಿಮಗೊಳಿಸುತ್ತಿದ್ದಾರೆ. ‘ಪೈಲ್ವಾನ್’ನ ನಾಯಕಿ ಯಾರಿರಬಹುದೆಂಬ ಕುತೂಹಲ ಕೂಡಾ ಚಿತ್ರ ರಸಿಕರಲ್ಲಿ ಮನೆಮಾಡಿದೆ. ಹೆಬ್ಬುಲಿ ಬಳಿಕ ಸುದೀಪ್ ಹಾಗೂ ಎಸ್.ಕೃಷ್ಣ ಜೊತೆಗೂಡಿರುವ ಚಿತ್ರ ಇದಾಗಿದೆ. ಸ್ವಪ್ನ ಕೃಷ್ಣ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕರುಣಾಕರ್ ಕ್ಯಾಮರಾ ಹಿಡಿಯಲಿದ್ದಾರೆ.