ರೇಸ್3ನಲ್ಲಿ ಜಾಕ್ವೆಲಿನ್ ಸಾಹಸ

Update: 2017-12-08 12:48 GMT

ಈ ತನಕ ಗ್ಲಾಮರ್ ಪಾತ್ರಗಳಲ್ಲೇ ಗುರುತಿಸಿಕೊಳ್ಳುತ್ತಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್, ಈಗ ಆ್ಯಕ್ಷನ್ ಪಾತ್ರದಲ್ಲಿ ಮಿಂಚಲು ಸಿದ್ಧರಾಗುತ್ತಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ‘ರೇಸ್3’ ನಲ್ಲಿ ಜಾಕ್ವೆಲಿನ್ ಪ್ರೇಕ್ಷಕರನ್ನು ಬೆರಗುಗೊಳಿಸುವಂತಹ ಸ್ಟಂಟ್ ದೃಶ್ಯಗಳನ್ನು ತಾನಾಗಿಯೇ ನಿರ್ವಹಿಸಲಿದ್ದಾರೆ. ಇದಕ್ಕಾಗಿ ಆಕೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

‘ರೇಸ್3’ಗಾಗಿ ಜಾಕ್ವೆಲಿನ್, ಸಮರಕಲೆಗಳಲ್ಲಿ ಈಗಾಗಲೇ ತರಬೇತಿ ಪಡೆಯುತ್ತಿದ್ದಾರೆ. ಜೊತೆಗೆ ಚೇಸಿಂಗ್ ದೃಶ್ಯದಲ್ಲಿ ಪಾಲ್ಗೊಳ್ಳುವುದಕ್ಕಾಗಿಯೂ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿ ದ್ದಾರೆ. ರೇಸ್ ಚಿತ್ರದಲ್ಲಿ ಜಾಕ್ವೆಲಿನ್ ಸಿಕ್ರೇಟ್ ಪೊಲೀಸ್ ಆಫೀಸರ್‌ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ಜಾಕ್ವೆಲಿನ್‌ಗೆ ಈ ಮೊದಲೇ ಸಾಹಸ ದೃಶ್ಯಗಳಲ್ಲಿ ನಟಿಸಬೇಕೆಂಬ ಹಂಬಲವಿದ್ದಿತಂತೆ. ಆದರೆ ಅಂತಹ ಪಾತ್ರಗಳು ತನಗೆ ಒದಗಿಬರಲೇ ಇಲ್ಲ. ಈಗ ‘ರೇಸ್ 3’ ತನ್ನ ಬಹುದಿನಗಳ ಆಸೆಯನ್ನು ಈಡೇರಿಸಿದೆ ಎಂದು ಜಾಕ್ವೆಲಿನ್ ಹೇಳಿಕೊಂಡಿದ್ದಾರೆ.

ಕಿಕ್ ಚಿತ್ರದ ಬಳಿಕ ಸಲ್ಮಾನ್ ಹಾಗೂ ಜಾಕ್ವೆಲಿನ್, ಈ ಚಿತ್ರದಲ್ಲಿ ಮತ್ತೊಮ್ಮೆ ಜೊತೆಯಾಗಿ ನಟಿಸುತ್ತಿದ್ದಾರೆ. ನೃತ್ಯಪ್ರಧಾನ ಚಿತ್ರ ಎಬಿಸಿಡಿಯ ಮೂಲಕ ನಿರ್ದೇಶಕನಾಗಿ ಹೆಸರು ಮಾಡಿರುವ ರೆಮೋ ಡಿಸೋಝಾ, ‘ರೇಸ್3’ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.ರೇಸ್ ಸರಣಿ ಚಿತ್ರಗಳ ಮುಂದುವರಿದ ಭಾಗವಾದ ಈ ಚಿತ್ರದಲ್ಲಿ ಸಲ್ಮಾನ್ ಕೂಡಾ ಅತ್ಯಂತ ರೋಚಕ ಆ್ಯಕ್ಷನ್ ದೃಶ್ಯಗಳನ್ನು ನಿರ್ವಹಿಸಲಿದ್ದಾರೆ. ಬಾಬಿ ಡಿಯೋಲ್, ಡೇಸಿ ಶಾ, ಸಕೀಬ್ ಸಲೀಲ್, ಪೂಜಾಹೆಗ್ಡೆ ಮತ್ತಿತರರ ಬಹುದೊಡ್ಡ ತಾರಾಬಳಗವೇ ‘ರೇಸ್3’ನಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News