ಗುಜರಾತ್: ಡಿ.9ರಂದು ಮೊದಲಹಂತದ ಮತದಾನ
ಅಹ್ಮದಾಬಾದ್, ಡಿ.8: ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆಗೆ ಸಾಕ್ಷಿಯಾಗಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಶನಿವಾರ ಮೊದಲ ಹಂತದ ಮತದಾನ ನಡೆಯಲಿದೆ. ಸೌರಾಷ್ಟ್ರ ಹಾಗೂ ದಕ್ಷಿಣ ಗುಜರಾತ್ ಪ್ರಾಂತದ 89 ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದ್ದು, 977 ಅಭ್ಯರ್ಥಿಗಳ ಚುನಾ ವಣಾ ಭವಿಷ್ಯ ನಿರ್ಧಾರವಾಗಲಿದೆ. 2.12 ಕೋಟಿ ಮತದಾರರು ಮತದಾನಕ್ಕೆ ಅರ್ಹರಾಗಿದ್ದಾರೆ.
ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಯೂ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ನಾಳೆ ಚುನಾವಣಾ ಭವಿಷ್ಯ ನಿರ್ಧಾರವಾಗಲಿರುವ ಅಭ್ಯರ್ಥಿಗಳಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ, ಕಾಂಗ್ರೆಸ್ ನಾಯಕ ಶಕ್ತಿ ಸಿನ್ಹಾ ಗೋಹಿಲ್ ಹಾಗೂ ಪರೇಶ್ ಧನಾನಿ ಪ್ರಮುಖರಾಗಿದ್ದಾರೆ.
ತವರು ರಾಜ್ಯವಾದ ಗುಜರಾತ್‌ನ ವಿಧಾನಸಭಾ ಚುನಾವಣೆಯು ಪ್ರಧಾನಿ ಮೋದಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದರೆ, ಶೀಘ್ರದಲ್ಲೇ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ರಾಹುಲ್‌ಗಾಂಧಿಗೆ ಸತ್ವ ಪರೀಕ್ಷೆಯಾಗಿ ಪರಿಣಮಿಸಿದೆ.
ಮೊದಲ ಹಂತದ ಚುನಾವಣೆ ನಡೆಯಲಿರುವ ಸೌರಾಷ್ಟ್ರ ಹಾಗೂ ದಕ್ಷಿಣ ಗುಜರಾತ್‌ನಲ್ಲಿ ಪ್ರಧಾನಿ ಮೋದಿ, 15ಕ್ಕೂ ಅಧಿಕ ಬಿಜೆಪಿಯ ಚುನಾವಣಾ ಪ್ರಚಾರ ರ್ಯಾಲಿ ಗಳಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡಾ ಹಲವಾರು ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದರು. ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಅರುಣ್ ಜೇಟ್ಲಿ, ರಾಜನಾಥ್‌ಸಿಂಗ್, ನಿರ್ಮಲಾ ಸೀತಾರಾಮನ್,ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಬಿಜೆಪಿಯ ಚುನಾವಣಾ ಪ್ರಚಾರದ ಮುಂಚೂಣಿಯಲ್ಲಿದ್ದರು.
ರಾಹುಲ್ ಅವರನ್ನು ಹೊರತುಪಡಿಸಿ, ಕಾಂಗ್ರೆಸ್ ಪರವಾಗಿ ಚುನಾವಣಾ ನಡೆಸಿದವರಲ್ಲಿ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್, ಜ್ಯೋತಿರಾದಿತ್ಯ ಸಿಂಧ್ಯಾ, ಸಚಿನ್ ಪೈಲಟ್ ಪ್ರಮುಖರು.
ಪಾಟೀದಾರ್ ಆಂದೋಲನದ ನಾಯಕ ಹಾರ್ದಿಕ್ ಪಟೇಲ್, ದಲಿತ ನಾಯಕ ಜಿಗ್ನೇಶ್ ಮೆವಾನಿ ಹಾಗೂ ಓಬಿಸಿ ನಾಯಕ ಅಲ್ಪೇಶ್ ಠಾಕೂರ್, ಕಾಂಗ್ರೆಸ್‌ನ್ನು ಬೆಂಬಲಿಸಿರುವುದು, ಸತತ 6ನೇ ಬಾರಿಗೆ ಅಧಿಕಾರಕ್ಕೇರಲು ತವಕಿಸುತ್ತಿರುವ ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಡಿಸೆಂಬರ್ 14ರಂದು ಎರಡನೆ ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 18ರಂದು ಮತಏಣಿಕೆ ನಡೆಯಲಿದೆ.
ಮೊದಲ ಹಂತದ ಚುನಾವಣೆ
99 ಕ್ಷೇತ್ರಗಳು
927 ಅಭ್ಯರ್ಥಿಗಳು
2.12 ಕೋಟಿ ಮತದಾರರು
ಪ್ರಮುಖ ಅಭ್ಯರ್ಥಿಗಳು
ಮುಖ್ಯಮಂತ್ರಿ ವಿಜಯ್ ರೂಪಾನಿ (ರಾಜ್‌ಕೋಟ್-ಪಶ್ಚಿಮ), ಕಾಂಗ್ರೆಸ್ ನಾಯಕರಾದ ಶಕ್ತಿ ಸಿನ್ಹಾ ಗೋಯಲ್ (ಮಾಂಡ್ವಿ) ಹಾಗೂ ಪರೇಶ್ ಧನಾನಿ (ಆಮ್ರೇಲಿ).