ವ್ಯಭಿಚಾರ ಪ್ರಕರಣದಲ್ಲಿ ಮಹಿಳೆಯರಿಗೂ ಶಿಕ್ಷೆ ?

Update: 2017-12-08 14:11 GMT

ಹೊಸದಿಲ್ಲಿ, ಡಿ.8: ವ್ಯಭಿಚಾರ ಪ್ರಕರಣದ ಬಗ್ಗೆ ಭಾರತದಲ್ಲಿ ಇರುವ ಕಾನೂನಿನಂತೆ ಮಹಿಳೆಯರನ್ನು ಶಿಕ್ಷಿಸುವಂತಿಲ್ಲ. ಆದರೆ ಈ ಪ್ರಕರಣದಲ್ಲಿ ಸಿಕ್ಕಿಬೀಳುವ ಪುರುಷರನ್ನು ಶಿಕ್ಷಿಸಲಾಗುತ್ತದೆ. ಇದೀಗ 19ನೆಯ ಶತಮಾನದ ಈ ಕಾನೂನನ್ನು ಮತ್ತೊಮ್ಮೆ ಪರಿಶೀಲಿಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ.

 ವ್ಯಭಿಚಾರವನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗಿದೆ. ಯಾವುದೇ ಕ್ರಿಮಿನಲ್ ಅಪರಾಧದಲ್ಲಿ ಲಿಂಗ ತಾರತಮ್ಯವಿಲ್ಲ. ಆದ್ದರಿಂದ ವ್ಯಭಿಚಾರದ ಪ್ರಕರಣದಲ್ಲಿ ಮಾತ್ರ ಯಾಕೆ ಇದನ್ನು ಪಾಲಿಸಲಾಗುತ್ತದೆ ಎಂದು ಪ್ರಶ್ನಿಸಿರುವ ಉಚ್ಛನ್ಯಾಯಾಲಯ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸರಿಸಮಾನರಾಗಿರುವಾಗ , ವ್ಯಭಿಚಾರ ಪ್ರಕರಣದಲ್ಲಿ ಶಿಕ್ಷೆ ವಿಧಿಸುವಾಗ ಮಹಿಳೆಯರಿಗೆ ವಿನಾಯಿತಿ ನೀಡುವುದಕ್ಕೆ ಸಕಾರಣ ಕಂಡುಬರುತ್ತಿಲ್ಲ ಎಂದು ಸುಪ್ರೀಂಕೋರ್ಟ್‌ನ ನ್ಯಾಯಪೀಠ ತಿಳಿಸಿದೆ. ವಿವಾಹಿತೆ ಹಾಗೂ ವ್ಯಕ್ತಿಯೊಬ್ಬನ ಮಧ್ಯೆ ಲೈಂಗಿಕ ಸಂಬಂಧದ ಬಗ್ಗೆ ಆಕೆಯ ಪತಿ ದೂರು ನೀಡಿದರೆ ಆಗ ಆ ವ್ಯಕ್ತಿಯ ಮೇಲೆ ಕಾನೂನುಕ್ರಮ ಜರಗಿಸಲು ‘ಭಾರತೀಯ ದಂಡ ಸಂಹಿತೆ’ಯಲ್ಲಿ ನಿಯಮ ರೂಪಿಸಲಾಗಿದೆ. ಇಲ್ಲಿ ಅಪರಾಧಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

    ವ್ಯಭಿಚಾರದ ಬಗ್ಗೆ ಇರುವ ಕಾನೂನಿಗೆ ಸಂಸತ್ತಿನಲ್ಲಿ ತಿದ್ದುಪಡಿ ತರಬೇಕು ಎಂದು ಕೋರಿ ಕೇರಳ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. 1937ರಲ್ಲಿ ಥಾಮಸ್ ಬ್ಯಾಬಿಂಗ್ಟನ್ ಮಕಾಲೆ ನೇತೃತ್ವದ ಸಮಿತಿಯು ಶಿಫಾರಸು ಮಾಡಿದ್ದ ಪ್ರಥಮ ಕರಡು ಪ್ರತಿಯಲ್ಲಿ ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸಿರಲಿಲ್ಲ. ನಂತರ ದಶಕದ ಬಳಿಕ ನೇಮಿಸಲಾಗಿದ್ದ ಮತ್ತೊಂದು ಆಯೋಗವು ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸಲು ಶಿಫಾರಸು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News