ಅಯೋಧ್ಯೆ ವಿವಾದ: “ತೀರ್ಪು ಹಿಂದೂಗಳ ಪರ ಇರದಿದ್ದರೆ ನಾವೇ ಅದನ್ನು ಪಡೆಯುತ್ತೇವೆ”
ಭೋಪಾಲ್, ಡಿ.8: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಲಿರುವ ತೀರ್ಪು ಹಿಂದೂಗಳ ಪರವಾಗಿ ಇರದಿದ್ದರೆ , ಹಿಂದೂ ಸಮುದಾಯ ತಮ್ಮ ಪರವಾಗಿ ತೀರ್ಪನ್ನು ‘ಪಡೆಯುತ್ತದೆ’ ಎಂದು ಬಿಜೆಪಿ ಮುಖಂಡ ತಪನ್ ಭೌಮಿಕ್ ನೀಡಿರುವ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ಬಾಬರಿ ಮಸೀದಿ ಧ್ವಂಸ ಘಟನೆಯ ವಾರ್ಷಿಕ ದಿನಾಚರಣೆಯ ಸಂದರ್ಭ ಭೌಮಿಕ್ ಈ ಹೇಳಿಕೆ ನೀಡಿದ್ದಾರೆ. ಹಿಂದೂಗಳು ಈಗ ಎಚ್ಚರಗೊಂಡಿದ್ದಾರೆ. ಸುಪ್ರೀಂಕೋರ್ಟ್ ನೀಡಲಿರುವ ತೀರ್ಪು ಹಿಂದೂಗಳ ಪರ ಇರಲಿದೆ. ಒಂದು ವೇಳೆ ವಿರುದ್ಧವಾಗಿದ್ದರೂ ಹಿಂದೂಗಳು ತಮ್ಮ ಪರ ತೀರ್ಪು ಪಡೆಯುತ್ತಾರೆ ಎಂದು ಮಧ್ಯಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಭೌಮಿಕ್ ಹೇಳಿದ್ದಾರೆ.
ಈ ಹೇಳಿಕೆಯನ್ನು ಕಟುವಾಗಿ ಖಂಡಿಸಿರುವ ರಾಜ್ಯ ಕಾಂಗ್ರೆಸ್ ವಕ್ತಾರ ಪಂಕಜ್ ಚತುರ್ವೇದಿ, ಬಿಜೆಪಿ ಪಕ್ಷ ಭಾರತದ ಸಂವಿಧಾನ ಮತ್ತು ಕಾನೂನನ್ನು ಗೌರವಿಸುತ್ತದೆಯೇ ಇಲ್ಲವೇ ಎಂಬುದನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದಾರೆ. ಪ್ರಕರಣವೊಂದು ಇನ್ನೂ ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಿರುವ ಸಂದರ್ಭದಲ್ಲಿ ಬಿಜೆಪಿ ಮುಖಂಡನೋರ್ವ ಸಾರ್ವಜನಿಕವಾಗಿ ಇಂತಹ ಹೇಳಿಕೆ ನೀಡಬಹುದೇ ಎಂದು ಪ್ರಶ್ನಿಸಿರುವ ಅವರು, ಭೌಮಿಕ್ ಹೇಳಿಕೆಯನ್ನು ಸುಪ್ರೀಂಕೋರ್ಟ್ ಗಣನೆಗೆ ತೆಗೆದುಕೊಂಡು ಅವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರಗಿಸಬೇಕು ಎಂದು ಅವರು ಹೇಳಿದ್ದಾರೆ.