×
Ad

ಜಾಹೀರಾತು, ಪ್ರಚಾರಕ್ಕೆ ಮೋದಿ ಸರಕಾರ ವ್ಯಯಿಸಿದ್ದು 3,755 ಕೋಟಿ ರೂ.

Update: 2017-12-08 21:18 IST

ಹೊಸದಿಲ್ಲಿ, ಡಿ.8: ಕಳೆದ ಮೂರೂವರೆ ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪ್ರಚಾರ ಕಾರ್ಯಕ್ಕೆ ಸುಮಾರು 3,755 ಕೋಟಿ ರೂ. ಖರ್ಚು ಮಾಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆ ತಿಳಿಸಿದೆ.

ಗ್ರೇಟರ್ ನೋಯ್ಡಾ ಮೂಲದ ಸಾಮಾಜಿಕ ಕಾರ್ಯಕರ್ತ ರಾಮ್‌ವೀರ್ ತನ್ವರ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಗೆ ಪ್ರತಿಕ್ರಿಯಿಸಿರುವ ಇಲಾಖೆ, 2014ರ ಎಪ್ರಿಲ್‌ನಿಂದ 2017ರ ಅಕ್ಟೋಬರ್‌ವರೆಗಿನ ಅವಧಿಯಲ್ಲಿ ಇಲೆಕ್ಟ್ರಾನಿಕ್, ಮುದ್ರಣ ಮಾಧ್ಯಮ ಹಾಗೂ ಹೊರಾಂಗಣ ಪ್ರಚಾರ ಕಾರ್ಯಕ್ಕೆ ಒಟ್ಟು 37,54,06,23,616 ರೂ. ಖರ್ಚು ಮಾಡಲಾಗಿದೆ.

   ಇದರಲ್ಲಿ ಸಮುದಾಯ ರೇಡಿಯೊ, ಡಿಜಿಟಲ್ ಸಿನೆಮಾ, ದೂರದರ್ಶನ, ಇಂಟರ್‌ನೆಟ್, ಎಸ್‌ಎಂಎಸ್ ಮತ್ತು ಟಿವಿ ಸೇರಿದಂತೆ ಇಲೆಕ್ಟ್ರಾನಿಕ್ಸ್ ಮಾಧ್ಯಮ ಜಾಹೀರಾತಿಗೆ 1,656 ಕೋಟಿ ರೂ. ಖರ್ಚು ಮಾಡಲಾಗಿದೆ. ಮುದ್ರಣ ಮಾಧ್ಯಮದಲ್ಲಿ ಪ್ರಚಾರಕ್ಕೆ 1,698 ಕೋಟಿ ರೂ, ಹೋರ್ಡಿಂಗ್‌ಗಳು, ಪೋಸ್ಟರ್‌ಗಳು, ಕೈಪಿಡಿಗಳು, ಕ್ಯಾಲೆಂಡರ್‌ಗಳು ಸೇರಿದಂತೆ ಹೊರಾಂಗಣ ಪ್ರಚಾರಕ್ಕೆ 399 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಆರ್‌ಟಿಐ ಅರ್ಜಿಗೆ ನೀಡಲಾದ ಮಾಹಿತಿಯಲ್ಲಿ ತಿಳಿಸಲಾಗಿದೆ.

ಸರಕಾರ ಮತ್ತು ಕೆಲವು ಸಚಿವಾಲಯಗಳ ಮಹತ್ವದ ಯೋಜನೆಗಳ ಪ್ರಚಾರಕ್ಕೆ ಹೆಚ್ಚು ವ್ಯಯ ಮಾಡಲಾಗಿದೆ ಎಂದು ಸರಕಾರ ತಿಳಿಸಿದೆ. ಆದರೆ ಪರಿಸರ ಮಾಲಿನ್ಯ ಜಾಗೃತಿ ಕಾರ್ಯಕ್ರಮದ ಕುರಿತಾದ ಪ್ರಚಾರ ಕಾರ್ಯಕ್ಕೆ ಕಳೆದ ಮೂರು ವರ್ಷದಲ್ಲಿ ಕೇವಲ 56.8 ಕೋಟಿ ರೂ. ನಿಗದಿಪಡಿಸಿರುವುದು ಗಮನಾರ್ಹವಾಗಿದೆ.

2015ರಲ್ಲಿ ಪ್ರಧಾನಿಯವರ ‘ಮನ್ ಕಿ ಬಾತ್’ ಕಾರ್ಯಕ್ರಮದ ಪ್ರಚಾರಕ್ಕಾಗಿಯೇ ಸುಮಾರು 8.5 ಕೋಟಿ ರೂ. ವ್ಯಯಿಸಲಾಗಿದೆ ಎಂಬುದು ಮತ್ತೊಂದು ಆರ್‌ಟಿಐ ಅರ್ಜಿಯಿಂದ ತಿಳಿದು ಬಂದಿದೆ. 2015ರಲ್ಲಿ ದಿಲ್ಲಿಯ ಆಮ್ ಆದ್ಮಿ ಪಕ್ಷದ ಸರಕಾರ ತನ್ನ ಸಾಧನೆಯ ಪ್ರಚಾರ ಕಾರ್ಯಕ್ಕಾಗಿ 526 ಕೋಟಿ ರೂ. ವ್ಯಯಿಸಿರುವುದನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಟೀಕಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News